ಆವ ಕುಲವೋ ರಂಗಾ
ವಾದಿರಾಜ ತೀರ್ಥರುಆವ ಕುಲವೋ ರಂಗಾ ಅರಿಯಲಾಗದು ||ಪ||
ಆವ ಕುಲವೆಂದರಿಯಲಾಗದು ಗೋವಕಾವ ಗೊಲ್ಲನಂತೆ |
ದೇವಲೋಕದ ಪಾರಿಜಾತ ಹೂವ ಸತಿಗೆ ತಂದನಂತೆ ||ಅಪ||
ಗೋಕುಲದಲ್ಲಿ ಪುಟ್ಟಿದನಂತೆ ಗೋಗಳನ್ನು ಕಾಯ್ದನಂತೆ |
ಕೊಳಲನೂದಿ ಮೃಗ ಪಕ್ಷಿಗಳ ಮರುಳು ಮಾಡಿದನಂತೆ ||
ತರಳತನದಿ ಒರಳ ನಿಗಹಿ ಮರವ ಮುರಿದು ಮತ್ತೆ ಹಾರಿ |
ತೆರೆದ ಬಾಯೊಳಗೀರೇಳು ಲೋಕವ ಇರಿಸಿ ತಾಯ್ಗೆ ತೋರ್ದನಂತೆ ||೧||
ಗೊಲ್ಲತಿಯರ ಮನೆಯ ಪೊಕ್ಕು ಕಳ್ಳತನವ ಮಾಡ್ದನಂತೆ |
ಬಲ್ಲಿದ ಪೂತನಿ ವಿಷವನುಂಡು ಮೆಲ್ಲನೆ ತೃಣನಾ ಕೊಂದನಂತೆ ||
ಪಕ್ಷಿ ತನ್ನ ವಾಹನವಂತೆ ಹಾವು ತನ್ನ ಹಾಸಿಗೆಯಂತೆ |
ಮುಕ್ಕಣ್ಣ ತನ್ನ ಮೊಮ್ಮಗನಂತೆ ಮುದ್ದು ಮುಖದ ಚೆಲ್ವನಂತೆ ||೨||
ಕರಡಿ ಮಗಳ ತಂದನಂತೆ ಶರಧಿ ಮಗಳು ಮಡದಿಯಂತೆ |
ಧರಣಿಯನ್ನು ಬೇಡಿದನಂತೆ ಈರೇಳು ಲೋಕದ ಒಡೆಯನಂತೆ ||
ಹಡಗಿನಿಂದಲಿ ಬಂದನಂತೆ ಕಡಲ ತಡಿಯಲಿ ನಿಂದನಂತೆ |
ಒಡನೆ ಮಧ್ವರಿಗೊಲಿದನಂತೆ ಒಡೆಯ ಹಯವದನನಂತೆ ||೩||