ಇಟ್ಹಾಂಗೆ ಇರುವೆನೋ ಹರಿಯೇ
ಶ್ರೀಪಾದರಾಜರುಇಟ್ಹಾಂಗೆ ಇರುವೆನೊ ಹರಿಯೇ ಎನ್ನ ದೊರೆಯೇ ॥ಪ॥
ಸೃಷ್ಟಿವಂದಿತ ಪಾದಪದುಮ ಶ್ರೀಹರಿಯೇ ॥ಅ.ಪ॥
ಸಣ್ಣ ಶಾಲ್ಯೋದನ್ನ ಬೆಣ್ಣೆ ಕಾಸಿದ ತುಪ್ಪ
ಚಿನ್ನದ ಹರಿವಾಣದಲಿ ಭೋಜನ
ಘನ್ನಮಹಿಮ ನಿನ್ನ ಕರುಣ ತಪ್ಪಿದ ಮ್ಯಾಲೆ ಕ-
ದನ್ನ ಕಾಣದೆ ಬಾಯ್ಬಿಡಿಸುವಿ ಹರಿಯೇ ॥೧॥
ಕೆಂಪಿಲಿ ಪೊಳೆವ ಪೀತಾಂಬರ ಉಡಿಸುವಿ
ಸೊಂಪಿನಂಚಿನ ಶಾಲು ಹೊದಿಸುವಿಯೋ
ಕಪಿಲಹರೇ ನಿನ್ನ ಕೃಪೆಯು ತಪ್ಪಿದ ಮ್ಯಾಲೆ
ಕಪರ್ದಕ ಕೌಪೀನವು ದೊರೆಯದೊ ಹರಿಯೇ ॥೨॥
ಚಂದ್ರಶಾಲೇಲಿ ಚಂದ್ರಕಿರಣದಂತೊಪ್ಪುವ
ಚಂದದ ಮಂಚದೊಳ್ ಮಲಗಿಸುವಿ
ಮಂದರೋದ್ಧರ ನಿನ್ನ ಮಮತೆ ತಪ್ಪಲು ಧರ್ಮ-
ಮಂದಿರದೊಳು ತೋಳ್ತಲೆಗಿಂಬು ಹರಿಯೇ ॥೩॥
ನರಯಾನದೊಳು ಕ್ಷಣ ನರವರನೆನಿಸುವಿ
ವರಛತ್ರ ಚಾಮರ ಹಾಕಿಸುವಿ
ಕರುಣಾನಿಧೇ ನಿನ್ನ ಕರುಣ ತಪ್ಪಿದ ಮ್ಯಾಲೆ
ಚರಣರಕ್ಷೆಯು ದೊರೆಯದು ಶ್ರೀಹರಿಯೇ ॥೪॥
ಗಂಗಾಜನಕ ಪಾಂಡುರಂಗ ನಿನ್ನಯ ಭಕ್ತರ
ಸಂಗವಿರಲಿ ದುಷ್ಟ ಸಂಗ ಬ್ಯಾಡ
ಅಂಗನೆಯರ ಕೂಡಿ ಅನಂಗಬಾಣಕೆ ಸಿಲುಕಿ
ಭಂಗವ ಪಡಲಾರೆ ರಂಗವಿಠಲ ಹರಿಯೇ ॥೫॥