ಮಧ್ವನಾಮ
ಶ್ರೀಪಾದರಾಜರುಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ
ಅಖಿಲಗುಣ ಸದ್ಧಾಮ ಮಧ್ವನಾಮ ॥ಪ॥
ಆವ ಕಚ್ಛಪ ರೂಪದಿಂದಲಂಡೋದಕವ
ಓವಿ ಧರಿಸಿದ ಶೇಷಮೂರುತಿಯನು ।
ಆವವನ ಬಲ ಪಡಿದು ಹರಿಯ ಸುರರೈದುವರು
ಆ ವಾಯು ನಮ್ಮ ಕುಲಗುರು ರಾಯನು ॥೧॥
ಆವವನು ದೇಹದಿರೆ ಹರಿಯು ತಾ ನೆಲೆಸಿಹನು
ಆವವನು ತೊಲಗೆ ಹರಿ ತಾ ತೊಲಗುವ ।
ಆವವನು ದೇಹದೊಳಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲಗುರು ರಾಯನು ॥೨॥
ಕರಣಾಭಿಮಾನಿ ದಿವಿಜರು ದೇಹವ ಬಿಡಲು
ಕುರುಡ ಕಿವುಡನು ಮೂಕನೆಂದೆನಿಸುವ ।
ಪರಮ ಮುಖ್ಯಪ್ರಾಣ ತೊಲಗಲಾ ದೇಹವನು
ಅರಿತು ಪೆಣವೆಂದು ಪೇಳ್ವರು ಬುಧಜನ ॥೩॥
ಸುರರೊಳಗೆ ನರರೊಳಗೆ ಸರ್ವಭೂತಗಳೊಳಗೆ
ಪರತರನೆನಿಸಿ ನೇಮದಿ ನೆಲೆಸಿಹ ।
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು
ಗುರುಕುಲತಿಲಕ ಮುಖ್ಯ ಪವಮಾನನು ॥೪॥
ಹನುಮಂತ ಅವತಾರ
ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು
ವಾತಸುತ ಹನುಮಂತನೆಂದೆನಿಸಿದ ।
ಪೋತಭಾವದಿ ತರಣಿಬಿಂಬಕ್ಕೆ ಲಂಘಿಸಿದ
ಈತಗೆಣೆ ಯಾರು ಮೂರ್ಲೋಕದೊಳಗೆ ॥೫॥
ತರಣಿಗಭಿಮುಖನಾಗಿ ಶಬ್ದಶಾಸ್ತ್ರವ ಪಠಿಸಿ
ಉರವಣಿಸಿ ಹಿಂದುಮುಂದಾಗಿ ನಡೆದ ।
ಪರಮ ಪವಮಾನಸುತ ಉದಯಾಸ್ತ ಶೈಲಗಳ
ಭರದಿಯೈದಿದ ಈತಗುಪಮೆ ಉಂಟೇ ॥೬॥
ಅಖಿಲವೇದಗಳ ಸಾರವ ಧರಿಸಿ ಮುನ್ನ ತಾ
ನಿಖಿಲ ವ್ಯಾಕರಣ ಶಾಸ್ತ್ರವ ಪೇಳಿದ ।
ಮುಖದಲ್ಲಿ ಕಿಂಚಿದಪಶಬ್ದ ಇವಗಿಲ್ಲೆಂದು
ಮುಖ್ಯಪ್ರಾಣನ ರಾಮನನುಕರಿಸಿದ ॥೭॥
ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿ
ಧರಣಿಸುತೆಯಳ ಕಂಡು ದನುಜರೊಡನೆ ।
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ
ಉರುಹಿ ಲಂಕೆಯ ಬಂದ ಹನುಮಂತನು ॥೮॥
ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಬಲು ರಕ್ಕಸರನು ।
ಒರೆಸಿ ರಣದಲಿ ದಶಶಿರನ ಹುಡಿಗುಟ್ಟಿ ತಾ
ಮೆರೆದ ಹನುಮಂತ ಬಲವಂತ ಧೀರ ॥೯॥
ಉರಗಬಂಧಕೆ ಸಿಲುಕಿ ಕಪಿವರರು ಮೈಮರೆಯೆ
ತರಣಿಕುಲತಿಲಕನಾಜ್ಞೆಯ ತಾಳಿದ ।
ಗಿರಿಸಹಿತ ಸಂಜೀವನವ ಕಿತ್ತು ತಂದಿತ್ತ
ಹರಿವರಗೆ ಸರಿಯುಂಟೆ ಹನುಮಂತಗೆ ॥೧೦॥
ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆ
ಭಜಿಸಿ ಮೌಕ್ತಿಕದ ಹಾರವನು ಪಡೆದ ।
ಅಜಪದವಿಯನು ರಾಮ ಕೊಡುವೆನೆನೆ ಹನುಮಂತ
ನಿಜ ಭಕುತಿಯನೆ ಬೇಡಿ ವರವ ಪಡೆದ ॥೧೧॥
ಭೀಮ ಅವತಾರ
ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ
ಸೋಮಕುಲದಲಿ ಜನಿಸಿ ಪಾರ್ಥನೊಡನೆ ।
ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ
ಆ ಮಹಿಮ ನಮ್ಮ ಕುಲಗುರು ರಾಯನು ॥೧೨॥
ಕರದಿಂದ ಶಿಶುಭಾವನಾದ ಭೀಮನ ಬಿಡಲು
ಗಿರಿಯೊಡೆದು ಶತಶೃಂಗವೆಂದೆನಿಸಿತು ।
ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ
ಅರೆವ ವೀರನಿಗೆ ಸುರನರರು ಸರಿಯೇ ॥೧೩॥
ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ
ಹಸಿದುರಗಗಳ ಮ್ಯಾಲೆ ಬಿಡಲದನೊರಸಿದ ।
ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ
ಧರಿಸಿ ಜಾಹ್ನವಿಗೊಯ್ದ ತನ್ನನುಜರ ॥೧೪॥
ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರ
ನಿಲ್ಲದೊರಸಿದ ಲೋಕಕಂಟಕರನು ।
ಬಲ್ಲಿದಸುರರ ಗೆಲಿದು ದ್ರೌಪದಿಯ ಕೈಪಿಡಿದು
ಎಲ್ಲ ಸುಜನರಿಗೆ ಹರುಷವ ತೋರಿದ ॥೧೫॥
ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿ
ರಾಜಸೂಯಾಗವನು ಮಾಡಿಸಿದನು ।
ಆಜಿಯೊಳು ಕೌರವರ ಬಲವ ಸವರುವೆನೆಂದು
ಮೂರ್ಜಗವರಿಯೆ ಕಂಕಣವ ಕಟ್ಟಿದ ॥೧೬॥
ಕಾನನವ ಪೊಕ್ಕು ಕಿಮ್ಮೀರಾದಿಗಳ ಮುರಿದು
ದಾನವರ ಸವರಬೇಕೆಂದು ಬ್ಯಾಗ ।
ಮಾನನಿಧಿ ದ್ರೌಪದಿಯ ಮನದಿಂಗಿತವನರಿತು
ಮಾನಿನಿಗೆ ಸೌಗಂಧಿಕವನೆ ತಂದ ॥೧೭॥
ದುರುಳ ಕೀಚಕನು ತಾ ದ್ರೌಪದಿಯ ಚೆಲುವಿಕೆಗೆ
ಮರುಳಾಗಿ ಕರಕರೆಯ ಮಾಡಲವನ ।
ಗರಡಿಮನೆಯೊಳು ಬರಸಿ ಸವರಿ ಅವನನ್ವಯವ
ಕುರುಪನಟ್ಟಿದ ಮಲ್ಲಕುಲವ ಸದೆದ ॥೧೮॥
ವೈರಿದುಶ್ಶಾಸನ್ನ ತೊಡೆಮೇಲೆ ಎದೆಗೆಡಹಿ
ವೀರ ನರಹರಿಯ ಲೀಲೆಯ ತೋರಿದ ।
ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ
ಓರಂತೆ ಕೌರವರ ಮುರಿದು ಮೆರೆದ ॥೧೯॥
ಗುರುಸುತನು ಸಂಗರದಿ ನಾರಾಯಣಾಸ್ತ್ರ ಬಿಡೆ
ಉರವಣಿಸಿ ಬರಲು ಶಸ್ತ್ರವ ಬಿಸುಟದೆ ।
ಹರಿಯ ಕೃಪೆ ಪೆಡೆದಿದ್ದ ಭೀಮ ಹುಂಕಾರದಲಿ
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ ॥೨೦॥
ನೀರಲಡಗಿದ್ದ ದುರ್ಯೋಧನನ ಹೊರಗೆಡಹಿ
ಊರುದ್ವಯವ ತನ್ನ ಗದೆಯಿಂದ ಮುರಿದ ।
ನಾರಿರೋದನ ಕೇಳಿ ಮನಮರುಗಿ ಗುರುಸುತನ
ಹಾರಿಹಿಡಿದು ಶಿರೋರತ್ನ ತೆಗೆದ ॥೨೧॥
ಚಂಡವಿಕ್ರಮನು ಗದೆಗೊಂಡು ರಣದೊಳಗೆ ಭೂ-
ಮಂಡಲದೊಳಿದಿರಾಂತ ಖಳರನೆಲ್ಲಾ ।
ಹಿಂಡಿ ಬಿಸುಟಿದ ವೃಕೋದರನ ಪ್ರತಾಪವನು
ಕಂಡು ನಿಲ್ಲುವರಾರು ತ್ರಿಭುವನದೊಳು ॥೨೨॥
ಮಧ್ವ ಅವತಾರ
ದಾನವರು ಕಲಿಯುಗದೊಳವತರಿಸಿ ವಿಬುಧರೊಳು
ವೇನನ ಮತವನರುಹಲದನರಿತು ।
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ
ಮಾನನಿಧಿ ಮಧ್ವಾಖ್ಯನೆಂದೆನಿಸಿದ ॥೨೩॥
ಅರ್ಭಕತನವನೈದಿ ಬದರಿಯಲಿ ಮಧ್ವಮುನಿ
ನಿರ್ಭಯದಿ ಸಕಲಶಾಸ್ತ್ರವ ಪಠಿಸಿದ ।
ಉರ್ಬಿಯೊಳಗಾಮ್ನ್ಯಾಯ ತತ್ವದಾ ಮಾರ್ಗವನು
ಸರ್ಬ ಸುಜನರಿಗರುಹಿದ ಮೋದದಿ ॥೨೪॥
ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ
ದುರ್ವಾದಿಗಳ ಮತವ ನೆರೆ ಖಂಡಿಸಿ ।
ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿದಾ
ಶರ್ವಾದಿ ಗೀರ್ವಾಣ ಸಂತತಿಯಲಿ ॥೨೫॥
ಏಕವಿಂಶತಿ ಕುಭಾಷ್ಯಗಳ ಬೇರನು ತರಿದು
ಶ್ರೀಕರಾರ್ಚಿತನೊಲುಮೆ ಶಾಸ್ತ್ರ ರಚಿಸಿ ।
ಲೋಕತ್ರಯದೊಳಿದ್ದ ಸುರರು ಆಲಿಸುವಂತೆ
ಕಮಲನಾಭಾದಿ ಯತಿನಿಕರಕೊರೆದ ॥೨೬॥
ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ
ಪದಕೆರಗಿ ಅಖಿಳ ವೇದಾರ್ಥಗಳನು ।
ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವ
ಯೈದಿದ ಮಧ್ವಮುನಿರಾಯಗಭಿವಂದಿಪೆ ॥೨೭॥
ಜಯಜಯತು ದುರ್ವಾದಿಮತತಿಮಿರ ಮಾರ್ತಾಂಡ
ಜಯಜಯತು ವಾದಿಗಜಪಂಚಾನನ ।
ಜಯಜಯತು ಚಾರ್ವಾಕ ಗರ್ವಪರ್ವತಕುಲಿಶ
ಜಯಜಯತು ಜಗನ್ನಾಥ ಮಧ್ವನಾಥ ॥೨೮॥
ತುಂಗಕುಲ ಗುರುವರನ ಹೃತ್ಕಮಲದಲಿ ನೆಲೆಸಿ
ಭಂಗವಿಲ್ಲದೆ ಸುಖವ ಸುಜನಕೆಲ್ಲ ।
ಹಿಂಗದೆ ಕೊಡುವ ಗುರು ಮಧ್ವಾಂತರಾತ್ಮಕ
ರಂಗವಿಠಲನೆಂದು ನೆರೆನಂಬಿರೋ ॥೨೯॥
ಶ್ರೀ ಜಗನ್ನಾಥದಾಸ ವಿರಚಿತ
ಫಲಸ್ತುತಿ
ಸೋಮ ಸೂರ್ಯೋಪರಾಗದಿ ಗೋಸಹಸ್ರಗಳ
ಭೂಮಿದೇವರಿಗೆ ಸುರನದಿಯ ತಟದಿ ।
ಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲಮಕ್ಕು
ಈ ಮಧ್ವನಾಮ ಬರೆದೋದಿದರ್ಗೆ ॥೩೦॥
ಪುತ್ರರಿಲ್ಲದಿರೆ ಸತ್ಪುತ್ರರೈದುವರು
ಸರ್ವತ್ರದಲಿ ದಿಗ್ವಿಜಯವಹುದು ಸಕಲ ।
ಶತ್ರುಗಳು ಕೆಡುವರಪಮೃತ್ಯು ಬರಲಂಜುವುದು
ಸೂತ್ರನಾಮಕನ ಸಂಸ್ತುತಿ ಮಾತ್ರದಿ ॥೩೧॥
ಶ್ರೀಪಾದರಾಯ ಪೇಳಿದ ಮಧ್ವನಾಮ ಸಂ-
ತಾಪ ಕಳೆದಖಿಳ ಸೌಖ್ಯವನೀವುದು ।
ಶ್ರೀಪತಿ ಜಗನ್ನಾಥವಿಠಲನ ತೋರಿ ಭವ
ಕೂಪಾರದಿಂದ ಕಡೆ ಹಾಯಿಸುವುದು ॥೩೨॥