ಲಾಲಿ ಗೋವಿಂದ ಲಾಲಿ
ಶ್ರೀಪಾದರಾಜರುಲಾಲಿ ಗೋವಿಂದ ಲಾಲಿ
ಕೌಸಲ್ಯ ಬಾಲ ಶ್ರೀರಾಮ ಲಾಲಿ ॥ಪ॥
ಲಾಲಿ ಮುನಿವಂದ್ಯ ಲಾಲಿ
ಜಾನಕೀರಮಣ ಶ್ರೀರಾಮ ಲಾಲಿ ॥ಅ.ಪ॥
ಆಶ್ಚರ್ಯಜನಕವಾಗಿ ನಿರ್ಮಿಸಿದ
ಪಚ್ಚೆಯ ತೊಟ್ಟಿಲಲ್ಲಿ
ಅಚ್ಯುತಾನಂತನಿರಲು ತೂಗಿದರು
ಮತ್ಸ್ಯಾವತಾರ ಹರಿಯ ॥೧॥
ಧರ್ಮಸ್ಥಾಪಕನು ಎಂದು ನಿರವಧಿಕ
ನಿರ್ಮಲ ಚರಿತ್ರನೆಂದು
ಮರ್ಮ ಕರ್ಮಗಳ ಪಾಡಿ ತೂಗಿದರು
ಕೂರ್ಮಾವತಾರ ಹರಿಯ ॥೨॥
ಸರಸಿಜಾಕ್ಷಿಯರೆಲ್ಲರು ಜನವಶೀಕರ
ದಿವ್ಯರೂಪನೆಂದು
ಪರಮ ಹರುಷದಲಿ ಪಾಡಿ ತೂಗಿದರು
ವರಹಾವತಾರ ಹರಿಯ ॥೩॥
ಕರಿಕುಂಭಗಳ ಪೋಲುವ ಕುಚದಲ್ಲಿ
ಹಾರಪದಕವು ಹೊಳೆಯಲು
ವರ ವರ್ಣಿನಿಯರು ಪಾಡಿ ತೂಗಿ
ನರಸಿಂಹಾವತಾರ ಹರಿಯ ॥೪॥
ಭಾಮಾಮಣಿಯರೆಲ್ಲರು ಯದುವಂಶ
ಸೋಮನಿವನೆಂದು ಪೊಗಳಿ
ನೇಮದಿಂದಲಿ ಪಾಡಿ ತೂಗಿದರು
ವಾಮನಾವತಾರ ಹರಿಯ ॥೫॥
ಸಾಮಜವರದನೆಂದು ಅತುಳ
ಭೃಗುರಾಮಾವತಾರವೆಂದು
ಶ್ರೀಮದಾನಂದ ಹರಿಯ
ತೂಗಿದರು ಪ್ರೇಮಾತಿರೇಕದಿಂದ ॥೬॥
ಕಾಮನಿಗೆ ಕಾಮನೆಂದು ಸುರಸಾರ್ವ
ಭೌಮ ಗುಣಧಾಮನೆಂದು
ವಾಮನೇತ್ರೆಯರು ಪಾಡಿ ತೂಗಿದರು
ರಾಮಾವತಾರ ಹರಿಯ ॥೭॥
ಸೃಷ್ಟಿಯ ಕರ್ತನೆಂದು ಜಗದೊಳಗೆ
ಶಿಷ್ಟ ಸಂತುಷ್ಟನೆಂದು
ದೃಷ್ಟಾಂತರಹಿತನೆಂದು ತೂಗಿದರು
ಕೃಷ್ಣಾವತಾರ ಹರಿಯ ॥೮॥
ವೃದ್ಧನಾರಿಯರೆಲ್ಲರು ಜಗದೊಳು
ಪ್ರಸಿದ್ಧನಿವನೆಂದು ಪೊಗಳಿ
ಬದ್ಧಾನುರಾಗದಿಂದ ತೂಗಿದರು
ಬೌದ್ಧಾವತಾರ ಹರಿಯ ॥೯॥
ಥಳಥಳಾತ್ಕಾರದಿಂದ ರಂಜಿಸುವ
ಮಲಯಜ ಲೇಪದಿಂದ
ಜಲಜಗಂಧಿಯರು ಪಾಡಿ ತೂಗಿದರು
ಕಲ್ಕ್ಯಾವತಾರ ಹರಿಯ ॥೧೦॥
ಕನಕಮಯ ಖಚಿತವಾದ ತಲ್ಪದಲಿ
ವನಜಭವ ಜನಕನಿರಲು
ವನಜನಾಭನ್ನ ಪಾಡಿ ತೂಗಿದರು
ವನಿತಾಮಣಿಯರೆಲ್ಲರು ॥೧೧॥
ಪದ್ಮರಾಗವ ಪೋಲುವ ಹರಿಪಾದ
ಪದ್ಮವನು ತಮ್ಮ ಹೃದಯ
ಪದ್ಮದಲಿ ನಿಲಿಸಿ ಪಾಡಿ ತೂಗಿದರು
ಪದ್ಮಿನೀ ಭಾಮಿನಿಯರು ॥೧೨॥
ಹಸ್ತಭೂಷಣ ಮೆರೆಯಲು ದಿವ್ಯತರ
ಹಸ್ತಲಾಘವಗಳಿಂದ
ಹಸ್ತಗಳ ಪಿಡಿದುಕೊಂಡು ತೂಗಿದರು
ಹಸ್ತಿನೀ ಭಾಮಿನಿಯರು ॥೧೩॥
ಮತ್ತಗಜಗಾಮಿನಿಯರು ದಿವ್ಯತರ
ಚಿತ್ರ ವಸ್ತ್ರಗಳನುಟ್ಟು
ಚಿತ್ತ ಸಂತೋಷದಿಂದ ತೂಗಿದರು
ಚಿತ್ತಿನೀ ಭಾಮಿನಿಯರು ॥೧೪॥
ಕಂಕಣ ಧ್ವನಿಗಳಿಂದ ರಂಜಿಸುವ
ಕಿಂಕಿಣೀ ಸ್ವರಗಳಿಂದ
ಪಂಕಜಾಕ್ಷಿಯರು ಪಾಡಿ ತೂಗಿದರು
ಶಂಕಿನೀ ಭಾಮಿನಿಯರು ॥೧೫॥
ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವ
ಮಕರಿಕಾಪತ್ರ ಬರೆದು
ಲಿಕುಚಸ್ತನಿಯರು ಪಾಡಿ ತೂಗಿದರು
ಅಕಳಂಕಚರಿತ ಹರಿಯ ॥೧೬॥
ಆನಂದಸದನದೊಳಗೆ ಗೋಪಿಯರು
ಆನಂದಸುತನ ಕಂಡು
ಆನಂದಭರಿತರಾಗಿ ತೂಗಿದರು
ಆನಂದ ಭೈರವಿಯಿಂದ ॥೧೭॥
ದೇವಾಧಿದೇವನೆಂದು ಈ ಶಿಶುವು
ಭಾವನಾತೀತನೆಂದು
ದೇವ ಗಂಧರ್ವರ್ಪಾಡಿ ತೂಗಿದರು
ದೇವ ಗಾಂಧಾರದಿಂದ ॥೧೮॥
ನೀಲ ಘನನೀಲ ಜೋ ಜೋ
ಕರುಣಾಲವಾಲ ಶ್ರೀಕೃಷ್ಣ ಜೋ ಜೋ
ಲೀಲಾವತಾರ ಜೋ ಜೋ
ಪರಮಾತ್ಮ ಬಾಲಗೋಪಾಲ ಜೋ ಜೋ ॥೧೯॥
ಇಂದುಧರಮಿತ್ರ ಜೋ ಜೋ
ಶ್ರೀಕೃಷ್ಣ ಇಂದುರವಿನೇತ್ರ ಜೋ ಜೋ
ಇಂದುಕುಲಪುತ್ರ ಜೋ ಜೋ
ಪರಮಾತ್ಮ ಇಂದಿರಾರಮಣ ಜೋ ಜೋ ॥೨೦॥
ತುಂಗ ಭವಭಂಗ ಜೋ ಜೋ
ಪರಮಾತ್ಮ ರಂಗ ಕೃಪಾಂಗ ಜೋ ಜೋ
ಮಂಗಳಾಪಾಂಗ ಜೋ ಜೋ
ಮೋಹನಾಂಗ ರಂಗವಿಠಲನೆ ಜೋ ಜೋ ॥೨೧॥