Command Palette

Search for a command to run...

ಕರುಣಿಸೋ ರಂಗಾ ಕರುಣಿಸು
ಪುರಂದರದಾಸರು
ಕರುಣಿಸೋ ರಂಗಾ ಕರುಣಿಸು ಕೃಷ್ಣಾ ಕರುಣಿಸೋ ರಂಗಾ ಕರುಣಿಸು । ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ॥ಪ॥ ರುಕುಮಾಂಗದನಂತೆ ವ್ರತವ ನಾನರಿಯೆ ಶುಕಮುನಿಯಂತೆ ಸ್ತುತಿಸಲು ಅರಿಯೆ । ಬಕವೈರಿಯಂತೆ ಧ್ಯಾನವ ಮಾಡಲರಿಯೇ ದೇವಕಿಯಂತೆ ಮುದ್ದಿಸಲರಿಯೆನೋ ರಂಗಾ ॥೧॥ ಗರುಡನಂದದಿ ಪೊತ್ತು ತಿರುಗಲು ಅರಿಯೆ ಕರೆಯಲು ಅರಿಯೆ ಕರಿರಾಜನಂತೆ । ವರಕಪಿಯಂತೆ ದಾಸ್ಯವ ಮಾಡಲರಿಯೇ ಸಿರಿಯಂತೆ ನೆರೆದು ಮೋಹಿಸಲರಿಯೆನೋ ಕೃಷ್ಣಾ ॥೨॥ ಬಲಿಯಂತೆ ದಾನವ ಕೊಡಲು ಅರಿಯೆನೋ ಭಕ್ತಿ ಛಲವನು ಅರಿಯೇ ಪ್ರಹ್ಲಾದನಂತೆ । ಒಲಿಸಲು ಅರಿಯೆ ಅರ್ಜುನನಂತೆ ಸಖನಾಗಿ ಸಲಹೋ ದೇವರ ದೇವ ಶ್ರೀ ಪುರಂದರವಿಠ್ಠಲ ॥೩॥