ಸಕಲ ಗ್ರಹಬಲ ನೀನೇ
ಪುರಂದರದಾಸರುಸಕಲ ಗ್ರಹಬಲ ನೀನೇ ಸರಸಿಜಾಕ್ಷ ।
ನಿಖಿಳ ರಕ್ಷಕ ನೀನೆ ವಿಶ್ವವ್ಯಾಪಕನೇ ॥ಪ॥
ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ
ಕವಿ ಗುರುವು ಶನಿಯು ಮಂಗಳನು ನೀನೇ ।
ದಿವ ರಾತ್ರಿಯು ನೀನೇ ನವ ವಿಧಾನವು ನೀನೇ
ಭವರೋಗ ಹರ ನೀನೇ ಭೇಷಜನು ನೀನೇ ॥೧॥
ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣ ನೀನೇ ।
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ॥೨॥
ಋತುವತ್ಸರವು ನೀನೆ ವ್ರತ ಯುಗಾದಿಯು ನೀನೇ
ಕ್ರತು ಹೋಮ ಯಜ್ಞ ಸದ್ಗತಿಯು ನೀನೇ ।
ಜಿತವಾಗಿ ಎನ್ನೊಡೆಯ ಪುರಂದರ ವಿಠಲನೇ
ಶ್ರುತಿಗೇ ಸಿಲುಕದ ಮಹಾಮಹಿಮನು ನೀನೇ ॥೩॥