ಚಂದ್ರಚೂಡ ಶಿವಶಂಕರ
ಪುರಂದರದಾಸರುವಾಮದೇವ ವಿರಿಂಚಿತನಯ ಉಮಾಮನೋಹರ ಉಗ್ರ ಧೂರ್ಜಟಿ
ಸಾಮಜಾಜಿನ ವಸನಭೂಷಣ ಸುಮನಸೋತ್ತಂಸ ।
ಕಾಮಹರ ಕೈಲಾಸಮಂದಿರ ಸೋಮಸೂರ್ಯಾನಲ ವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ ॥
ಚಂದ್ರಚೂಡ ಶಿವಶಂಕರ ಪಾರ್ವತಿರಮಣಾ ನಿನಗೆ ನಮೋ ॥ಪ॥
ಸುಂದರ ಮೃಗಧರ ಪಿನಾಕ ಧನುಕರ ಗಂಗಾಶಿರ
ಗಜಚರ್ಮಾಂಬರಧರ ನಮೋ ನಮೋ ॥ಅ.ಪ॥
ನಂದಿವಾಹನಾನಂದದಿಂದ ಮೂಜಗದಿ ಮೆರವೆ ನೀನೇ
ಅಂದು ಅಮೃತಘಟದಿಂದುದಿಸಿದ ವಿಷ ತಂದು ಭುಂಜಿಸಿದವ ನೀನೇ ।
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೇ
ಇಂದಿರೇಶ ಶ್ರೀರಾಮನ ಪಾದವ ಚಂದದಿ ಪೊಗಳುವ ನೀನೇ ॥೧॥
ಬಾಲಮಾರ್ಕಂಡನ ಕಾಲನು ಎಳೆವಾಗ ಪಾಲಿಸಿದವನು ನೀನೇ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ ।
ಕಾಲಕೂಟವ ಪಾನಮಾಡಿದ ನೀಲಕಂಠನು ನೀನೇ
ಜಾಲಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ ॥೨॥
ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರವಾಸನು ನೀನೇ
ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೇ ।
ಕೊರಳೊಳು ಭಸ್ಮ ರುದ್ರಾಕ್ಷಿಯ ಧರಿಸಿದ ಪರಮ ವೈಷ್ಣವ ನೀನೆ
ಗರುಡಗಮನ ಶ್ರೀ ಪುರಂದರವಿಠಲಗೆ ಪ್ರಾಣಪ್ರಿಯನು ನೀನೆ ॥೩॥