ಹರಿಭಕ್ತಿಸಾರ
ಕನಕದಾಸರುಶ್ರೀಯರಸ ಗಾಂಗೇಯನುತ ಕೌಂ
ತೇಯವಂದಿತ ಚರಣಕಮಲದ
ಳಾಯತಾಂಬಕರೂಪ ಚಿನ್ಮಯ ದೇವಕೀತನಯ
ರಾಯ ರಘುಕುಲವರ್ಯ ಭೂಸುರ
ಪ್ರೀಯ ಸುರಪುರನಿಲಯ ಚೆನ್ನಿಗ
ರಾಯ ಚತುರೋಪಾಯ ರಕ್ಷಿಸು ನಮ್ಮನನವರತ ॥೧॥
ದೇವದೇವ ಜಗದ್ಭರಿತ ವಸು
ದೇವಸುತ ಜಗದೇಕನಾಥ ರ
ಮಾವಿನೋದಿತ ಸಜ್ಜನಾನತ ನಿಖಿಲಗುಣಭರಿತ
ಭಾವಜಾರಿಪ್ರಿಯ ನಿರಾಮಯ
ರಾವಣಾಂತಕ ರಘುಕುಲಾನ್ವಯ
ದೇವ ಅಸುರವಿರೋಧಿ ರಕ್ಷಿಸು ನಮ್ಮನನವರತ ॥೨॥
ಅನುಪಮಿತಚಾರಿತ್ರ ಕರುಣಾ
ವನಧಿ ಭಕ್ತಕುಟುಂಬಿ ಯೋಗೀ
ಜನಹೃದಯಪರಿಪೂರ್ಣ ನಿತ್ಯಾನಂದ ನಿಗಮನುತ
ವನಜನಾಭ ಮುಕುಂದ ಮುರಮ
ರ್ದನ ಜನಾರ್ದನ ತ್ರೈಜಗತ್ಪಾ
ವನ ಸುರಾರ್ಚಿತ ದೇವ ರಕ್ಷಿಸು ನಮ್ಮನನವರತ ॥೩॥
ಕಮಲಸಂಭವವಿನuತ ವಾಸವ
ನಮಿತ ಮಂಗಳಚರಿತ ದುರಿತ
ಕ್ಷಮಿತ ರಾಘವ ವಿಶ್ವಪೂಜಿತ ವಿಶ್ವ ವಿಶ್ವಮಯ
ಅಮಿತವಿಕ್ರಮ ಭೀಮ ಸೀತಾ
ರಮಣ ವಾಸುಕಿಶಯನ ಖಗಪತಿ
ಗಮನ ಕಂಜಜನಯ್ಯ ರಕ್ಷಿಸು ನಮ್ಮನನವರತ ॥೪॥
ಕ್ಷೀರವಾರಿಧಿಶಯನ ಶಾಂತಾ
ಕಾರ ವಿವಿಧವಿಚಾರ ಗೋಪೀ
ಜಾರ ನವನಿತಚೋರ ಚಕ್ರಾಧಾರ ಭವದೂರ
ಮಾರಪಿತ ಗುಣಹಾರ ಸರಸಾ
ಕಾರ ರಿಪುಸಂಹಾರ ತುಂಬುರು
ನಾರದಪ್ರಿಯ ವರದ ರಕ್ಷಿಸು ನಮ್ಮನನವರತ ॥೫॥
ತಾಮರಸದಳನಯನ ಭಾರ್ಗವ
ರಾಮ ಹಲಧರರಾಮ ದಶರಥ
ರಾಮ ಮೇಘಶ್ಯಾಮ ಸದ್ಗುಣಧಾಮ ನಿಸ್ಸೀಮ
ಸಾಮಗಾನಪ್ರೇಮ ಕಾಂಚನ
ದಾಮಧರ ಸುತ್ರಾಮವಿನಮಿತ
ನಾಮ ರವಿಕುಲಸೋಮ ರಕ್ಷಿಸು ನಮ್ಮನನವರತ ॥೬॥
ವೇದಗೋಚರ ವೇಣುನಾದವಿ
ನೋದ ಮಂದರಶೈಲಧರ ಮಧು
ಸೂದನಾಚ್ಯುತ ಕಂಸದಾನವರಿಪು ಮಹಾಮಹಿಮ
ಯಾದವೇಂದ್ರ ಯಶೋದೆನಂದನ
ನಾದಬಿಂದುಕಳಾತಿಶಯ ಪ್ರ
ಹ್ಲಾದರಕ್ಷಕ ವರದ ರಕ್ಷಿಸು ನಮ್ಮನನವರತ ॥೭॥
ಅಕ್ಷಯಾಶ್ರಿತ ಸುಜನಜನ ಸಂ
ರಕ್ಷಣ ಶ್ರೀವತ್ಸಕೌಸ್ತುಭ
ಮೋಕ್ಷದಾಯಕ ಕುಟಿಲದಾನವಶಿಕ್ಷ ಕುಮುದಾಕ್ಷ
ಪಕ್ಷಿವಾಹನ ದೇವಸಂಕುಲ
ಪಕ್ಷ ನಿಗಮಾಧ್ಯಕ್ಷವರ ನಿಟಿ
ಲಾಕ್ಷಸಖ ಸರ್ವೇಶ ರಕ್ಷಿಸು ನಮ್ಮನನವರತ ॥೮॥
ಚಿತ್ರಕೂಟನಿವಾಸ ವಿಶ್ವಾ
ಮಿತ್ರ ಕ್ರತುಸಂರಕ್ಷ ರವಿಶಶಿ
ನೇತ್ರ ಭವ್ಯಚರಿತ್ರ ಸದ್ಗುಣಗಾತ್ರ ಸತ್ಪಾತ್ರ
ಧಾತ್ರಿಜಾಂತಕ ಕಪಟನಾಟಕ
ಸೂತ್ರ ಪರಮಪವಿತ್ರ ಫಲ್ಗುಣ
ಮಿತ್ರ ವಾಕ್ಯವಿಚಿತ್ರ ರಕ್ಷಿಸು ನಮ್ಮನನವರತ ॥೯॥
ಮಂಗಳಾತ್ಮಕ ದುರಿತತಿಮಿರಪ
ತಂಗ ಗರುಡತುರಂಗ ರಿಪುಮದ
ಭಂಗ ಕೀರ್ತಿತರಂಗ ಪುರಹರಸಂಗ ನೀಲಾಂಗ
ಅಂಗದಪ್ರಿಯನಂಗಪಿತ ಕಾ
ಳಿಂಗಮರ್ದನ ಅಮಿತಕರುಣಾ
ಪಾಂಗ ಶ್ರೀನರಸಿಂಗ ರಕ್ಷಿಸು ನಮ್ಮನನವರತ ॥೧೦॥
ದಾಶರಥಿ ವೈಕುಂಠನಗರನಿ
ವಾಸ ತ್ರೈಜಗದೀಶ ಪಾಪವಿ
ನಾಶ ಪರಮವಿಲಾಸ ಹರಿ ಸರ್ವೇಶ ದೇವೇಶ
ವಾಸುದೇವ ದಿನೇಶಶತಸಂ
ಕಾಶ ಯದುಕುಲವಂಶತಿಲಕ ಪ
ರಾಶರಾನತ ದೇವ ರಕ್ಷಿಸು ನಮ್ಮನನವರತ ॥೧೧॥
ಕುಂದಕುಟ್ಮಲರದನ ಪರಮಾ
ನಂದ ಹರಿ ಗೋವಿಂದ ಸನಕಸ
ನಂದವಂದಿತ ಸಿಂಧುಬಂಧನ ಮಂದರಾದ್ರಿಧರ
ಇಂದಿರಾಪತಿ ವಿಜಯಸಖ ಅರ
ವಿಂದನಾಭ ಪುರಂದರಾರ್ಚಿತ
ನಂದಕಂದ ಮುಕುಂದ ರಕ್ಷಿಸು ನಮ್ಮನನವರತ ॥೧೨॥
ಬಾಣಬಾಹುಚ್ಛೇದ ರಾವಣ
ಪ್ರಾಣನಾಶನ ಪುಣ್ಯನಾಮ ಪು
ರಾಣಪುರುಷೋತ್ತಮ ನಿಪುಣ ಅಣುರೇಣುಪರಿಪೂರ್ಣ
ಕ್ಷೋಣಿಪತಿ ಸುಲಲಿತ ಸುದರ್ಶನ
ಪಾಣಿ ಪಾಂಡವರಾಜಕಾರ್ಯಧು
ರೀಣ ಜಗನಿರ್ಮಾಣ ರಕ್ಷಿಸು ನಮ್ಮನನವರತ ॥೧೩॥
ನೀಲವರ್ಣ ವಿಶಾಲಶುಭಗುಣ
ಶೀಲ ಮುನಿಕುಲಪಾಲ ಲಕ್ಷ್ಮೀ
ಲೋಲ ರಿಪುಶಿಶುಪಾಲಮಸ್ತಕಶೂಲ ವನಮಾಲ
ಮೂಲಕಾರಣ ವಿಮಲ ಯಾದವ
ಜಾಲಹಿತ ಗೋಪಾಲ ಅಗಣಿತ
ಲೀಲ ಕೋಮಲಕಾಯ ರಕ್ಷಿಸು ನಮ್ಮನನವರತ ॥೧೪॥
ನಾಗನಗರಿ ಧರಿತ್ರಿ ಕೋಶವಿ
ಭಾಗ ತಂತ್ರನಿಯೋಗಗಮನ ಸ
ರಾಗ ಪಾಂಡವರಾಜಜಿತ ಸಂಗ್ರಾಮ ನಿಸ್ಸೀಮ
ಯೋಗಗಮ್ಯ ಭವಾಬ್ಧಿವಿಷಧರ
ನಾಗಗಾರುಡಮಂತ್ರವಿದ ಭವ
ರೋಗವೈದ್ಯ ವಿಚಿತ್ರ ರಕ್ಷಿಸು ನಮ್ಮನನವರತ ॥೧೫॥
ಶ್ರೀಮದುತ್ಸಹ ದೇವನುತ ಶ್ರೀ
ರಾಮ ನಿನ್ನಯ ಚರಣಸೇವಕ
ಪ್ರೇಮದಿಂ ಸಾಷ್ಟಾಂಗವೆರಗಿಯೆ ಮಾಳ್ಪೆ ಬಿನ್ನಪವ
ಈ ಮಹಿಯೊಳೀವರೆಗೆ ನಾವು ಸು
ಕ್ಷೇಮಿಗಳು ನಿನ್ನಯ ಪದಾಬ್ಜ
ಕ್ಷೇಮವಾರ್ತೆಯನರುಹಿ ರಕ್ಷಿಸು ನಮ್ಮನನವರತ ॥೧೬॥
ಈಗಲೀ ಮರ್ಯಾದೆಯಲಿ ಶರ
ಣಾಗತರ ಸೇವೆಯೊಳು ಹೊಂಪುಳಿ
ಯಾಗಿ ಬಾಳುವರೇನು ಧನ್ಯರೊ ಹರ ಮಹಾದೇವ
ಭೋಗಭಾಗ್ಯವ ಬಯಸಿ ಮುಕ್ತಿಯ
ನೀಗಿ ನಿಮ್ಮನು ಭಜಿಸಲರಿಯದ
ರಾಗಿಗಳ ಮಾತೇನು ರಕ್ಷಿಸು ನಮ್ಮನನವರತ ॥೧೭॥
ಭಕ್ತಿಸಾರದ ಚರಿತೆಯನು ಹರಿ
ಭಕ್ತರಾಲಿಸುವಂತೆ ರಚಿಸುವೆ
ಯುಕ್ತಿಯಲಿ ಬರೆದೋದಿದವರಿಷ್ಟಾರ್ಥ ಸಿದ್ಧಿಪುದು
ಮುಕ್ತಿಗಿದು ನೆಲೆದೋರುವುದು ಹರಿ
ಭಕ್ತರಿದ ಲಾಲಿಪುದು ನಿಜಮತಿ
ಭಕ್ತಿಗೊಲಿವಂದದಲಿ ರಕ್ಷಿಸು ನಮ್ಮನನವರತ ॥೧೮॥
ನಳಿನಲೋಚನ ನಿನ್ನ ಮೂರ್ತಿಯ
ಕಳೆ ಬೆಳಗುತಿದೆ ಲಹರಿಯಲಿ ಭೂ
ತಳದೊಳಚ್ಚರಿಯಾದ ನಾಮಾಮೃತಸಮುದ್ರದಲಿ
ಬಳಸುವರು ಸತ್ಕವಿಗಳವರ
ಗ್ಗಳಿಕೆಯೆನಗಿನಿತಿಲ್ಲ ಸನ್ಮತಿ
ಗಳಿಗೆ ಮಂಗಳವಿತ್ತು ರಕ್ಷಿಸು ನಮ್ಮನನವರತ ॥೧೯॥
ಗಿಳಿಯ ಮರಿಯನು ತಂದು ಪಂಜರ
ದೊಳಗೆ ಪೋಷಿಸಿ ಕಲಿಸಿ ಮೃದುನುಡಿ
ಗಳನು ಲಾಲಿಸಿ ಕೇಳ್ವ ಪರಿಣಿತರಂತೆ ನೀನೆನಗೆ
ತಿಳುಹು ಮತಿಯನು ಎನ್ನ ಜಿಹ್ವೆಗೆ
ಮೊಳಗುವಂದದಿ ನಿನ್ನ ನಾಮಾ
ವಳಿಯ ಪೊಗಳಿಕೆಯಿತ್ತು ರಕ್ಷಿಸು ನಮ್ಮನನವರತ ॥೨೦॥
ಪೊಗಳಲಳವೇ ನಿನ್ನ ನಾಮವ
ಸುಗುಣ ಸಚ್ಚಾರಿತ್ರಕಥನವ
ನಗಣಿತೋಪಮ ಅಮಿತವಿಕ್ರಮಗಮ್ಯ ನೀನೆಂದು
ನಿಗಮತತಿ ಕೈವಾರಿಸುತ ಪದ
ಯುಗವ ಕಾಣದೆ ಬಳಲುತಿದೆ ವಾ
ಸುಕಿಶಯನ ಸರ್ವೇಶ ರಕ್ಷಿಸು ನಮ್ಮನನವರತ ॥೨೧॥
ವೇದಶಾಸ್ತ್ರ ಪುರಾಣ ಪುಣ್ಯದ
ಹಾದಿಯನು ನಾನರಿಯೆ ತರ್ಕದ
ವಾದದಲಿ ಗುರುಹಿರಿಯರರಿಯದ ಮೂಢಮತಿಯೆನಗೆ
ಆದಿಮೂರುತಿ ನೀನು ನೆರೆ ಕರು
ಣೋದಯನು ಹೃದಯಾಂಗಣದಿ ಜ್ಞಾ
ನೋದಯವನೆನಗಿತ್ತು ರಕ್ಷಿಸು ನಮ್ಮನನವರತ ॥೨೨॥
ಹಸಿವರಿತು ತಾಯ್ ತನ್ನ ಶಿಶುವಿಗೆ
ಒಸೆದು ಮೊಲೆ ಕೊಡುವಂತೆ ನೀ ಪೋ
ಷಿಸದೆ ಬೇರಿನ್ನಾರು ಪೋಷಕರಾಗಿ ಸಲಹುವರು
ಬಸಿರೊಳಗೆ ಬ್ರಹ್ಮಾಂಡಕೋಟಿಯ
ಪಸರಿಸಿದ ಪರಮಾತ್ಮ ನೀನೆಂ
ದುಸುರುತಿವೆ ವೇದಗಳು ರಕ್ಷಿಸು ನಮ್ಮನನವರತ ॥೨೩॥
ಇಬ್ಬರಣುಗರು ನಿನಗೆಯವರೊಳ
ಗೊಬ್ಬ ಮಗನೀರೇಳು ಲೋಕದ
ಹೆಬ್ಬೆಳಸು ಬೆಳೆವಂತೆ ಕಾರಣಕರ್ತನಾದವನು
ಒಬ್ಬ ಮಗನದ ಬರೆವ ಕರಣಿಕ
ರಿಬ್ಬರೇ ಲೋಕಪ್ರಸಿದ್ಧರು
ಹಬ್ಬಿಸಿದೆ ಪ್ರಾಣಿಗಳ ರಕ್ಷಿಸು ನಮ್ಮನನವರತ ॥೨೪॥
ಸಿರಿಯು ಕುಲಸತಿ ಸುತನು ಕಮಲಜ
ಹಿರಿಯ ಸೊಸೆ ಶಾರದೆ ಸಹೋದರಿ
ಗಿರಿಜೆ ಮೈದುನ ಶಂಕರನು ಸುರರೆಲ್ಲ ಕಿಂಕರರು
ನಿರುತ ಮಾಯೆಯು ದಾಸಿ ನಿಜ ಮಂ
ದಿರವಜಾಂಡವು ಜಂಗಮಸ್ಥಾ
ವರಕುಟುಂಬಿಗ ನೀನು ರಕ್ಷಿಸು ನಮ್ಮನನವರತ ॥೨೫॥
ಸಾಗರನ ಮಗಳರಿಯದಂತೆ ಸ
ರಾಗದಲಿ ಸಂಚರಿಸುತಿಹವು
ದ್ಯೋಗವೇನು ನಿಮಿತ್ತ ಕಾರಣವಿಲ್ಲ ಲೋಕದಲಿ
ಭಾಗವತರಾದವರ ಸಲಹುವ
ನಾಗಿ ಸಂಚರಿಸುವುದು ಈ ಭವ
ಸಾಗರದಿ ಮುಳುಗಿಸದೆ ರಕ್ಷಿಸು ನಮ್ಮನನವರತ ॥೨೬॥
ಹಸ್ತಿವಾಹನನಾದಿಯಾದ ಸ
ಮಸ್ತ ದೇವನಿಕಾಯದೊಳಗೆ ಪ್ರ
ಶಸ್ತನಾವನು ನಿನ್ನವೋಲ್ ಶರಣಾಗತರ ಪೊರೆವ
ಹಸ್ತಕಲಿತ ಸುದರ್ಶನದೊಳರಿ
ಮಸ್ತಕವನಿಳುಹುವ ಪರಾತ್ಪರ
ವಸ್ತುವಲ್ಲವೆ ನೀನು ರಕ್ಷಿಸು ನಮ್ಮನನವರತ ॥೨೭॥
ಹಗೆಯರಿಗೆ ವರವೀವರಿಬ್ಬರು
ತೆಗೆಯಲರಿಯರು ಕೊಟ್ಟ ವರಗಳ
ತೆಗೆದುಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ
ಸುಗುಣರಿನ್ನಾರುಂಟು ಕದನವ
ಬಗೆದು ನಿನ್ನೊಳು ಜಯಿಸುವವರೀ
ಜಗದೊಳುಂಟೇ ದೇವ ರಕ್ಷಿಸು ನಮ್ಮನನವರತ ॥೨೮॥
ಸುಮನಸರ ವೈರದಲಿ ಕೆಲಬರು
ಕುಮತಿಗಳು ತಪದಿಂದ ಭರ್ಗನ
ಕಮಲಜನ ಪದಯುಗವ ಮೆಚ್ಚಿಸಿ ವರವ ಪಡೆದಿಹರು
ಸಮರಮುಖದೊಳಗುಪಮೆಯಲಿ ವಿ
ಕ್ರಮದಿ ವೈರವ ಮಾಡಿದವರಿಗೆ
ಅಮರಪದವಿಯನಿತ್ತೆ ರಕ್ಷಿಸು ನಮ್ಮನನವರತ ॥೨೯॥
ಬಲಿಯ ಬಂಧಿಸಿ ಮೊರೆಯಿಡುವ ಸತಿ
ಗೊಲಿದು ಅಕ್ಷಯವಿತ್ತು ಕರುಣದಿ
ಮೊಲೆಯನುಣಿಸಿದ ಬಾಲಿಕೆಯ ಪಿಡಿದಸುವನಪಹರಿಸಿ
ಶಿಲೆಯ ಸತಿಯಳ ಮಾಡಿ ತ್ರಿಪುರದ
ಲಲನೆಯರ ವ್ರತಗೆಡಿಸಿ ಕೂಡಿದ
ಕೆಲಸವುತ್ತಮವಾಯ್ತು ರಕ್ಷಿಸು ನಮ್ಮನನವರತ ॥೩೦॥
ಕರಿಯ ಕಾಯ್ದಾ ಜಲದಿ ಮಕರವ
ತರಿದು ಹಿರಣ್ಯಾಕ್ಷಕನ ಸೀಳ್ದಾ
ತರಳನನು ತಲೆಗಾಯ್ದು ಶಕಟಾಸುರನ ಹತಮಾಡಿ
ದುರುಳ ಕಂಸನ ಕೊಂದು ಮಗಧನ
ಮುರಿದು ವತ್ಸನ ಹಮ್ಮಳಿಸಿ ಖರ
ಹರಣವನು ಹಿಂಗಿಸಿದೆ ರಕ್ಷಿಸು ನಮ್ಮನನವರತ ॥೩೧॥
ಶಿಶುತನದ ಸಾಮರ್ಥ್ಯದಲಿ ಕೆಲ
ರಸುರರನು ಸಂಹರಿಸಿ ಚಕ್ರವ
ಬಿಸುಟು ಯೌವನಕಾಲದಲಿಯಾ ಪಾಂಡುಸುತರಿಂದ
ವಸುಮತಿಯ ಭಾರವನಿಳುಹಿ ಸಾ
ಹಸದಿ ಮೆರೆದವನಾಗಿ ನೀ ಮೆ
ಚ್ಚಿಸಿದೆ ತ್ರಿಜಗವನೆಲ್ಲ ರಕ್ಷಿಸು ನಮ್ಮನನವರತ ॥೩೨॥
ಎಲ್ಲರಲಿ ನೀನಾಗಿ ಸುಮನಸ
ರಲ್ಲಿಯತಿಹಿತನಾಗಿ ಯಾದವ
ರಲ್ಲಿ ಬಾಂಧವನಾಗಿ ದಾನವರಲ್ಲಿ ಹಗೆಯಾಗಿ
ಕೊಲ್ಲಿಸಿದೆ ಭೀಮಾರ್ಜುನರ ಕೈ
ಯಲ್ಲಿ ಕೌರವಕುಲವನೆಲ್ಲವ
ಬಲ್ಲಿದನು ನೀನಹುದು ರಕ್ಷಿಸು ನಮ್ಮನನವರತ ॥೩೩॥
ನರಗೆ ಸಾರಥಿಯಾಗಿ ರಣದೊಳು
ತುರಗ ನೀರಡಿಸಿದರೆ ವಾರಿಯ
ಸರಸಿಯನು ನಿರ್ಮಿಸಿ ಕಿರೀಟಿಯ ಕೈಲಿ ಸೈಂಧವನ
ಶಿರವ ಕೆಡಹಿಸಿ ಅವನ ತಂದೆಯ
ಕರತಳಕೆ ನೀಡಿಸಿದೆ ಹರ ಹರ
ಪರಮ ಸಾಹಸಿ ನೀನು ರಕ್ಷಿಸು ನಮ್ಮನನವರತ ॥೩೪॥
ಬವರದಲಿ ಖತಿಗೊಂಡು ಗದೆಯೊಳು
ಕವಿದು ನಿನ್ನ ಶ್ರುತಾಯುಧನು ಹೊ
ಕ್ಕವಘಡಿಸಿ ಹೊಯ್ದಾಡಿ ತನ್ನಾಯುಧದಿ ತಾ ಮಡಿದ
ವಿವರವೇನೋ ತಿಳಿಯೆ ಈ ಮಾ
ಯವನು ನೀನೇ ಬಲ್ಲೆ ನಿನ್ನಾ
ಯವನು ಬಲ್ಲವರುಂಟೆ ರಕ್ಷಿಸು ನಮ್ಮನನವರತ ॥೩೫॥
ಇಳೆಗೆ ಪತಿಯಾದವನು ಯಾದವ
ರೊಳಗೆ ಬಾಂಧವ ನಿನಗೆ ಸೋದರ
ದಳಿಯನಾದಭಿಮನ್ಯುವನು ಕೊಲ್ಲಿಸಿದೆ ಕೊಳಗುಳದಿ
ಅಳಲಿನಬುಧಿಯೊಳದ್ದಿ ತಂಗಿಯ
ಬಳಲಿಸಿದೆ ಕುಲಗೋತ್ರ ಬಾಂಧವ
ರೊಳಗೆ ಕೀರ್ತಿಯ ಪಡೆದೆ ರಕ್ಷಿಸು ನಮ್ಮನನವರತ ॥೩೬॥
ತಾಯನಗಲಿದ ತನಯನೀ ರಾ
ಧೇಯನೊಳಗೆ ರಹಸ್ಯದಲಿ ಕುಲ
ದಾಯವನು ನೆರೆ ತಿಳುಹಿಯರ್ಜುನನಿಂದ ಕೊಲ್ಲಿಸಿದೆ
ಮಾಯಮಂತ್ರದ ಕುಟಿಲಗುಣದ
ನ್ಯಾಯವೋ ಇದು ನ್ಯಾಯವೋ ನಿ
ನ್ನಾಯವನು ನೀ ಬಲ್ಲೆ ರಕ್ಷಿಸು ನಮ್ಮನನವರತ ॥೩೭॥
ಕೊಲ್ಲಬಗೆದವನಾಗಿ ನೀ ಹಗೆ
ಯಲ್ಲಿ ಸಖ್ಯವ ಬೆಳಸಲದು ಹಿತ
ವಲ್ಲ ನಿನ್ನಯ ಗುಣವ ಬಲ್ಲವರಿಲ್ಲ ಯದುಕುಲದಿ
ಗೊಲ್ಲನಾರಿಯರೊಳು ಪ್ರವರ್ತಕ
ನಲ್ಲವೇ ಭಾವಿಸಲು ಲೋಕದೊ
ಳೆಲ್ಲರೂ ಸರಿ ನಿನಗೆ ರಕ್ಷಿಸು ನಮ್ಮನನವರತ ॥೩೮॥
ಮಗನ ಕೊಂದವನಾಳುವಂತಾ
ಸುಗುಣೆಯರು ಹದಿನಾರು ಸಾವಿರ
ಸೊಗಸುಗಾತಿಯರವರ ಮೋಹದ ಬಲೆಗೆ ವಿಟನಾಗಿ
ಬಗೆಬಗೆಯ ರತಿಕಲೆಗಳಲಿ ಕೂ
ರುಗರ ನಾಟಿಸಿ ಮೆರೆದು ನೀನೀ
ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ ॥೩೯॥
ಏನು ಮಾಡಿದರೇನು ಕರ್ಮವ
ನೀನೊಲಿಯದಿನ್ನಿಲ್ಲವಿದಕನು
ಮಾನವುಂಟೇ ಭ್ರಮರಕೀಟನ್ಯಾಯದಂದದಲಿ
ನೀನೊಲಿಯೆ ತೃಣ ಪರ್ವತವು ಪುಸಿ
ಯೇನು ನೀ ಪತಿಕರಿಸೆ ಬಳಿಕಿ
ನ್ನೇನು ಚಿಂತಿಸಲೇಕೆ ರಕ್ಷಿಸು ನಮ್ಮನನವರತ ॥೪೦॥
ಎಷ್ಟುಮಾಡಲು ಮುನ್ನ ತಾ ಪಡೆ
ದಷ್ಟುಯೆಂಬುದ ಲೋಕದೊಳು ಮತಿ
ಗೆಟ್ಟ ಮಾನವರಾಡುತಿಹರಾ ಮಾತದಂತಿರಲಿ
ಪಟ್ಟವಾರಿಂದಾಯ್ತು ಧ್ರುವನಿಗೆ
ಕೊಟ್ಟ ವರ ತಪ್ಪಿತೆ ಕುಚೇಲನಿ
ಗಿಷ್ಟ ಬಾಂಧವ ನೀನು ರಕ್ಷಿಸು ನಮ್ಮನನವರತ ॥೪೧॥
ತನ್ನ ದೇಹಾತುರದಲಡವಿಯೊ
ಲನ್ಯರನು ಸಂಹರಿಸುತಿರುತಿರೆ
ನಿನ್ನ ನಾಮದೊಳಧಿಕವೆರಡಕ್ಷರವ ಬಣ್ಣಿಸುತ
ಧನ್ಯನಾದನು ಮುನಿಕುಲದ ಸಂ
ಪನ್ನನಾದನು ನೀನೊಲಿದ ಬಳಿ
ಕಿನ್ನು ಪಾತಕವುಂಟೆ ರಕ್ಷಿಸು ನಮ್ಮನನವರತ ॥೪೨॥
ನಿನ್ನ ಸತಿಗಳುಪಿದ ದುರಾತ್ಮನ
ಬೆನ್ನಿನಲಿ ಬಂದವನ ಕರುಣದಿ
ಮನ್ನಿಸಿದ ಕಾರಣ ದಯಾಪರಮೂರ್ತಿಯೆಂದೆನುತ
ನಿನ್ನ ಭಜಿಸಿದ ಸಾರ್ವಭೌಮರಿ
ಗಿನ್ನು ಇಹಪರವುಂಟು ಸದ್ಗುಣ
ರನ್ನ ಸಿರಿಸಂಪನ್ನ ರಕ್ಷಿಸು ನಮ್ಮನನವರತ ॥೪೩॥
ವೀರರಾವಣನೊಡನೆ ಹೋರಿದ
ವೀರರಗ್ಗದ ಕಪಿಗಳವರೊಳು
ಮಾರುತನ ಮಗನೇನು ಧನ್ಯನೊ ಬ್ರಹ್ಮಪಟ್ಟದಲಿ
ಸೇರಿಸಿದೆ ನಿನ್ನಂತೆ ಕೊಡುವ ಉ
ದಾರಿ ಯಾವನು ತ್ರಿಜಗದೊಳಗಾ
ಕಾರಣದಿ ನಂಬಿದೆನು ರಕ್ಷಿಸು ನಮ್ಮನನವರತ ॥೪೪॥
ಶಿವ ಶಿವಾ ನೀ ಮಾಡಿದುಪಕಾ
ರವನು ಮರೆತವರುಂಟೆ ಪಾಪದಿ
ನವೆದಜಾಮಿಳಗೊಲಿದು ಪ್ರಾಣವಿಯೋಗಕಾಲದಲಿ
ಜವನವರ ಕೈಗೊಪ್ಪಿಸದೆ ಕಾ
ಯ್ದವನು ನೀ ಮಾಧವನು ಮಿಕ್ಕಾ
ದವರಿಗುಂಟೇ ಕರುಣ ರಕ್ಷಿಸು ನಮ್ಮನನವರತ ॥೪೫॥
ಹೆತ್ತ ಮಗಳನು ಮದುವೆಯಾದವ
ನುತ್ತಮನು ಗುರುಪತ್ನಿಗಳುಪಿದ
ಚಿತ್ತಜನು ಮಾವನ ಕೃತಘ್ನನು ನಿನಗೆ ಮೈದುನನು
ಹೊತ್ತು ತಪ್ಪಿಸಿ ಕಾಮದಲಿ ಮುನಿ
ಪೋತ್ತಮನ ಮಡದಿಯನು ನೆರೆದವ
ಗಿತ್ತೆ ಕೈವಲ್ಯವನು ರಕ್ಷಿಸು ನಮ್ಮನನವರತ ॥೪೬॥
ಇಲ್ಲಿಹನು ಅಲ್ಲಿಲ್ಲವೆಂಬೀ
ಸೊಲ್ಲು ಸಲ್ಲದು ಹೊರಗೊಳಗೆ ನೀ
ನಲ್ಲದಿಲ್ಲನ್ಯತ್ರವೆಂಬುದನೆಲ್ಲ ಕೆಲಕೆಲರು
ಬಲ್ಲರಿಳೆಯೊಳು ಭಾಗವತರಾ
ದೆಲ್ಲರಿಗೆ ವಂದಿಸದ ಕುಜನರಿ
ಗಿಲ್ಲ ಸದ್ಗತಿ ನೋಡಿ ರಕ್ಷಿಸು ನಮ್ಮನನವರತ ॥೪೭॥
ಸಿರಿಯ ಸಂಪತ್ತಿನಲಿ ನೀ ಮೈ
ಮರೆದು ಮದಗರ್ವದಲಿ ದೀನರ
ಕರುಣದಿಂದೀಕ್ಷಿಸದೆ ಕಡೆಗಣ್ಣಿಂದ ನೋಡುವರೇ
ಹರಹರ ಅನಾಥರನು ಪಾಲಿಸಿ
ವರವ ಕೊಡುವ ಉದಾರಿಯೆಂಬೀ
ಬಿರುದ ಬಿಡುವರೆ ತಂದೆ ರಕ್ಷಿಸು ನಮ್ಮನನವರತ ॥೪೮॥
ದೀನ ನಾನು ಸಮಸ್ತ ಲೋಕಕೆ
ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು
ಏನ ಬಲ್ಲೆನು ನಾನು ನೆರೆ ಸು
ಜ್ಞಾನಮೂರುತಿ ನೀನು ನಿನ್ನ ಸ
ಮಾನರುಂಟೆ ದೇವ ರಕ್ಷಿಸು ನಮ್ಮನನವರತ ॥೪೯॥
ತರಳತನದಲಿ ಕೆಲವು ದಿನ ದುರು
ಭರದ ಗರ್ವದಿ ಕೆಲವು ದಿನ ಮೈ
ಮರೆದು ನಿಮ್ಮಡಿಗೆರಗದಾದೆನು ವಿಷಯಕೇಳಿಯಲಿ
ನರಕಭಾಜನನಾಗಿ ಕಾಮಾ
ತುರದಿ ಪರಧನ ಪರಸತಿಗೆ ಮನ
ಹರಿದ ಪಾಪವ ಕಳೆದು ರಕ್ಷಿಸು ನಮ್ಮನನವರತ ॥೫೦॥
ಮರೆದೆನಭ್ಯುದಯಲಿ ನಿಮ್ಮನು
ಮರೆಯೆನಾಪತ್ತಿನಲಿ ಹರಿಯೆಂ
ದೊರಲುವೆನು ಮನವೇಕಭಾವದೊಳಿಲ್ಲ ನಿಮ್ಮಡಿಯ
ಮರೆದು ಬಾಹಿರನಾದವನ ನೀ
ಮರೆವುದೇ ಹಸು ತನ್ನ ಕಂದನ
ಮರೆವುದೇ ಮಮತೆಯಲಿ ರಕ್ಷಿಸು ನಮ್ಮನನವರತ ॥೫೧॥
ಧಾರುಣಿಗೆ ವರ ಚಕ್ರವರ್ತಿಗ
ಳಾರು ಮಂದಿ ನೃಪಾಲಕರು ಹದಿ
ನಾರು ಮಂದಿಯು ಧರಣಿಯನು ಮುನ್ನಾಳ್ದ ನೃಪರೆನಿತೋ
ವೀರರನು ಮೆಚ್ಚಿದಳೆ ಧರಣೀ
ನಾರಿ ಬಹು ಮೋದದೊಳು ನಿನ್ನನು
ಸೇರಿಯೋಲೈಸುವಳು ರಕ್ಷಿಸು ನಮ್ಮನನವರತ ॥೫೨॥
ಭಾರಕರ್ತನು ನೀನು ಬಹು ಸಂ
ಸಾರಿಯೆಂಬುದು ನಿಗಮತತಿ ಕೈ
ವಾರಿಸುತ್ತಿದೆ ದಿವಿಜ ಮನುಜ ಭುಜಂಗರೊಳಗಿನ್ನು
ಆರಿಗುಂಟು ಸ್ವತಂತ್ರ ನಿನ್ನಂ
ತಾರು ಮುಕ್ತಿಯನೀವ ಸದ್ಗುರು
ವಾರು ಜಗದಧ್ಯಕ್ಷ ರಕ್ಷಿಸು ನಮ್ಮನನವರತ ॥೫೩॥
ಗತಿವಿಹೀನರಿಗಾರು ನೀನೇ
ಗತಿ ಕಣಾ ಪತಿಕರಿಸಿಕೊಡು ಸ
ದ್ಗತಿಯ ನೀನೆಲೆ ದೇವ ನಿನಗಪರಾಧಿ ನಾನಲ್ಲ
ಶ್ರುತಿವಚನವಾಡುವುದು ಶರಣಾ
ಗತರ ಸೇವಕನೆಂದು ನಿನ್ನನು
ಮತವಿಡಿದು ನಂಬಿದೆನು ರಕ್ಷಿಸು ನಮ್ಮನನವರತ ॥೫೪॥
ಈಗಲೋ ಈ ದೇಹವಿನ್ನ್ಯಾ
ವಾಗಲೋ ನಿಜವಿಲ್ಲವೆಂಬುದ
ನೀಗ ತಿಳಿಯದೆ ಮಡದಿ ಮನೆ ಮನೆವಾರ್ತೆಯೆಂದೆನುತ
ರಾಗಲೋಭದಿ ಮುಳುಗಿ ಮುಂದಣ
ಆಗುಹೋಗುಗಳರಿಯೆ ನಿನ್ನ ಸ
ಮಾಗಮವ ಬಯಸುವೆನು ರಕ್ಷಿಸು ನಮ್ಮನನವರತ ॥೫೫॥
ಮಾಂಸ ರಕ್ತದ ಮಡುವಿನಲಿ ನವ
ಮಾಸ ಜನನಿಯ ಜಠರದೊಳಗಿರು
ವಾ ಸಮಯದಲಿ ವೃತ್ತಿಯನು ಕಲ್ಪಿಸಿದ ಪ್ರಭುವಾರು
ನೀ ಸಲಹಿದವನಲ್ಲವೇ ಕರು
ಣಾಸಮುದ್ರನು ನೀನಿರಲು ಕಮ
ಲಾಸನನ ಹಂಗೇಕೆ ರಕ್ಷಿಸು ನಮ್ಮನನವರತ ॥೫೬॥
ಬಲು ಮೃಗವು ಮರ ಪಕ್ಷಿ ಕೀಟಕ
ಜಲಚರೌಘದಿ ಜನಿಸಿದೆನು ಕೋ
ಟಲೆಗೊಳಿಸಬೇಡ ಕಟಮಾನವನಾದ ಬಳಿಕಿನ್ನು
ಕೊಲಿಸದಿರು ಯಮನಿಂದ ಮುರಹರ
ಒಲಿದು ನಿನ್ನನು ಭಜಿಸುವವರಿಗೆ
ಕೊಲೆಗೆ ಕಾರಣವೇನು ರಕ್ಷಿಸು ನಮ್ಮನನವರತ ॥೫೭॥
ಪಂಚಭೂತದ ಕಾಯದೊಳು ನೀ
ವಂಚಿಸದೆ ಇರುತಿರಲು ಪೂರ್ವದ
ಸಂಚಿತದ ಫಲವೆನ್ನಲೇಕಿದ ಮರುಳುತನದಿಂದ
ಮಿಂಚುವವರಿನ್ನುಂಟೆ ತಿಳಿಯೆ ಪ್ರ
ಪಂಚವೆಲ್ಲಕೆ ತಪ್ಪಿದವ ನೀ
ಕೊಂಚಗಾರನೆ ಕೃಷ್ಣ ರಕ್ಷಿಸು ನಮ್ಮನನವರತ ॥೫೮॥
ಹಲವು ಕರ್ಮಗಳಿಂದ ಮೂತ್ರದ
ಬಿಲಗಳಲಿ ಸಂಚರಿಸಿ ಪದವಿಯ
ಫಲವ ಕಾಣದೆ ಹೊಲಬುದಪ್ಪಿದೆನೆನ್ನ ದೇಹದಲಿ
ಒಲಿದು ನೀನಿರೆ ನಿನ್ನ ಸಲುಗೆಯ
ಒಲುಮೆಯಲಿ ಬರಸೆಳೆವೆ ಮುಕುತಿಯ
ಲಲನೆಯನೆ ತಳುವಿಲ್ಲ ರಕ್ಷಿಸು ನಮ್ಮನನವರತ ॥೫೯॥
ಎತ್ತಿದೆನು ನಾನಾ ಶರೀರವ
ಹೊತ್ತು ಹೊತ್ತಲೆಸಿದೆನು ಸಲೆ ಬೇ
ಸತ್ತು ನಿನ್ನಯ ಪದವ ಕಾಣದೆ ತೊಳಲಿ ಬಳಲಿದೆನು
ಸತ್ತು ಹುಟ್ಟುವ ಹುಟ್ಟಿ ಹಿಂಗುವ
ಸುತ್ತ ತೊಡಕನು ಮಾಣಿಸದೆ ಪುರು
ಷೋತ್ತಮನೆ ಮನವೊಲಿದು ರಕ್ಷಿಸು ನಮ್ಮನನವರತ ॥೬೦॥
ಇಂದು ಈ ಜನ್ಮದಲಿ ನೀನೇ
ಬಂಧು ಹಿಂದಣ ಜನ್ಮದಲಿ ಬಳಿ
ಸಂದು ಮುಂದಣ ಜನ್ಮಕಧಿಪತಿಯಾಗಿ ಇರುತಿರಲು
ಎಂದಿಗೂ ತನಗಿಲ್ಲ ತನುಸಂ
ಬಂಧ ನಿನ್ನದು ಎನಗೆ ನೀ ಗತಿ
ಯೆಂದು ಬಿನ್ನವಿಸಿದೆನು ರಕ್ಷಿಸು ನಮ್ಮನನವರತ ॥೬೧॥
ಗಣನೆಯಿಲ್ಲದ ಜನನಿಯರು ಮೊಲೆ
ಯುಣಿಸಲಾ ಪಯಬಿಂದುಗಳನದ
ನೆಣಿಸಲಳವೇ ಸಪ್ತಸಾಗರಕಧಿಕವೆನಿಸಿಹುದು
ಬಣಗು ಕಮಲಜನದಕೆ ತಾನೇ
ಮಣೆಯಗಾರನು ಈತ ಮಾಡಿದ
ಕುಣಿಕೆಗಳ ನೀ ಬಿಡಿಸಿ ರಕ್ಷಿಸು ನಮ್ಮನನವರತ ॥೬೨॥
ಲೇಸಕಾಣೆನು ಜನನ ಮರಣದಿ
ಘಾಸಿಯಾದೆನು ನೊಂದೆನಕಟಾ
ಲೇಸೆನಿಸಿ ನೋಡಲು ಪರಾಪರವಸ್ತು ನೀನಾಗಿ
ನೀ ಸಲಹುವವನಲ್ಲವೇ ಕರು
ಣಾ ಸಮುದ್ರನು ನೀನಿರಲು ಕಮ
ಲಾಸನನ ಹಂಗೇನು ರಕ್ಷಿಸು ನಮ್ಮನನವರತ ॥೬೩॥
ಕಾಪುರುಷರೈದಾರುಮಂದಿ ಸ
ಮೀಪದಲಿ ಕಾಡುವರು ಎನ್ನನು
ನೀ ಪರಾಮರಿಸದೆ ಪರಾಕಾಗಿಹುದು ಲೇಸಲ್ಲ
ಶ್ರೀಪದಾಬ್ಜದ ಸೇವೆಯಲಿ ನೆರೆ
ಪಾಪವನು ಪರಿಹರಿಸಿ ನೀ ನಿಜ
ರೂಪಿನಲಿ ಬಂದೊದಗಿ ರಕ್ಷಿಸು ನಮ್ಮನನವರತ ॥೬೪॥
ಐದು ತತ್ವಗಳಾದವೊಂದ
ಕ್ಕೈದು ಕಡೆಯಲಿ ತತ್ವವಿಪ್ಪ
ತ್ತೈದು ಕೂಡಿದ ತನುವಿನಲಿ ವಂಚಿಸದೆ ನೀನಿರಲು
ಭೇದಿಸದೆ ಜೀವಾತ್ಮ ತಾ ಸಂ
ಪಾದಿಸಿದ ಸಂಚಿತ ಸುಕರ್ಮವ
ನಾದರಸಿ ಕೈಗೊಂಡು ರಕ್ಷಿಸು ನಮ್ಮನನವರತ ॥೬೫॥
ಎಂಟು ಗೇಣಿನ ದೇಹ ರೋಮಗ
ಳೆಂಟು ಕೋಟಿಯು ಕೀಲ್ಗಳರವ
ತ್ತೆಂಟು ಮಾಂಸಗಳಿಂದ ಮಾಡಿದ ಮನೆಯ ಮನವೊಲಿದು
ನೆಂಟ ನೀನಿದ್ದಗಲಿದೊಡೆ ಒಣ
ಹೆಂಟೆಯಲಿ ಮುಚ್ಚುವರು ದೇಹದ
ಲುಂಟೆ ಫಲ ಪುರುಷಾರ್ಥ ರಕ್ಷಿಸು ನಮ್ಮನನವರತ ॥೬೬॥
ಸ್ನಾನ ಸಂಧ್ಯಾ ಧ್ಯಾನ ಜಪತಪ
ದಾನ ಧರ್ಮ ಪರೋಪಕಾರ ವಿ
ಹೀನಕರ್ಮದೊಳಿರುವೆನಲ್ಲದೆ ಬೇರೆ ಗತಿಯುಂಟೆ
ಏನು ಮಾಡಿದಡೇನು ಮುಕ್ತಿ
ಜ್ಞಾನವಿಲ್ಲದಡಿಲ್ಲ ಭಕ್ತಿಗೆ
ನೀನೆ ಕಾರಣನಾಗಿ ರಕ್ಷಿಸು ನಮ್ಮನನವರತ ॥೬೭॥
ಕೋಪವೆಂಬುದು ತನುವಿನಲಿ ನೆರೆ
ಪಾಪ ಪಾತಕದಿಂದ ನರಕದ
ಕೂಪದಲಿ ಮುಳುಗುವುದು ತಪ್ಪದು ಶಾಸ್ತ್ರಸಿದ್ಧವಲೆ
ರಾಪು ಮಾಡದೆ ಬಿಡನು ಯಮನು ನಿ
ರಾಪರಾಧಿಯು ನೋಡಿ ಕೀರ್ತಿಕ
ಲಾಪವನು ನೀ ಕಾಯ್ದು ರಕ್ಷಿಸು ನಮ್ಮನನವರತ ॥೬೮॥
ನಿನ್ನ ಸೂತ್ರದೊಳಾಡುವವು ಚೈ
ತನ್ಯ ಸಚರಾಚರಗಳೆಲ್ಲವು
ನಿನ್ನ ಸೂತ್ರವು ತಪ್ಪಿದರೆ ಮುಗ್ಗುವುವು ಹೂಹೆಗಳು
ಇನ್ನು ನಮಗೆ ಸ್ವತಂತ್ರವೆಲ್ಲಿಯ
ದನ್ಯ ಕರ್ಮ ಸುಕರ್ಮವೆಲ್ಲವ
ನಿನ್ನದೆಂದೊಪ್ಪಿಸಿದೆ ರಕ್ಷಿಸು ನಮ್ಮನನವರತ ॥೬೯॥
ಒಡೆಯ ನೀನೆಂದರಿತು ನಾ ನಿ
ನ್ನಡಿಯ ಭಜಿಸದೆ ದುರುಳನಾದೆನು
ಮಡದಿ ಮಕ್ಕಳ ಮೋಹದಲಿ ಮನ ಸಿಲುಕಿತಡಿಗಡಿಗೆ
ಮಡದಿಯಾರೀ ಮಕ್ಕಳಾರೀ
ಒಡಲಿಗೊಡೆಯನು ನೀನು ನೀ ಕೈ
ಪಿಡಿದು ಮುದದಲಿ ಬಿಡದೆ ರಕ್ಷಿಸು ನಮ್ಮನನವರತ ॥೭೦॥
ವಂಟಿಸಿದ ಮದಮುಖರು ಕೆಲಕೆಲ
ರುಂಟು ರಿಪುಗಳು ದಂಟಿಸುತ ಬಲು
ಕಂಟಕದಿ ಕಾಡುವರು ಕಾಯೈ ಕಲುಷಸಂಹಾರ
ಬಂಟನಲ್ಲವೆ ನಾನು ದೀನರ
ನೆಂಟನಲ್ಲವೆ ನೀನು ನಿನ್ನೊಳ
ಗುಂಟೆ ನಿರ್ದಯ ನೋಡಿ ರಕ್ಷಿಸು ನಮ್ಮನನವರತ ॥೭೧॥
ದಂಡಧರನುಪಟಳದಿ ಮಿಗೆ ಮುಂ
ಕೊಂಡು ಮೊರೆಯಾಗುವರ ಕಾಣೆನು
ಪುಂಡರೀಕೋದ್ಭವನ ಶಿರವನು ಕಡಿದು ತುಂಡಿಸಿದ
ಖಂಡಪರಶುವು ರುದ್ರಭೂಮಿಯೊ
ಳಂಡಲೆದು ತಿರುಗುವನು ನೀನು
ದ್ದಂಡ ದೇವರ ದೇವ ರಕ್ಷಿಸು ನಮ್ಮನನವರತ ॥೭೨॥
ಶಕ್ತಿಯೆಂಬುದು ಮಾಯೆ ಮಾಯಾ
ಶಕ್ತಿಯದು ತನುವಿನಲಿ ನೀ ನಿಜ
ಮುಕ್ತಿದಾಯಕನಿರಲು ಸುಖದುಃಖಾದಿಗಳಿಗಾರು
ಯುಕ್ತಿಯೊಳಗಿದನರಿತು ಮನದಿ ವಿ
ರಕ್ತಿಯಲಿ ಭಜಿಸುವಗೆ ಮುಕ್ತಿಗೆ
ಭಕ್ತಿಯೇ ಕಾರಣವು ರಕ್ಷಿಸು ನಮ್ಮನನವರತ ॥೭೩॥
ಮೂರುಗುಣ ಮೊಳೆದೋರಿತದರೊಳು
ಮೂರು ಮೂರ್ತಿಗಳಾಗಿ ರಂಜಿಸಿ
ತೋರಿ ಸೃಷ್ಟಿಸ್ಥಿತಿಲಯಂಗಳ ರಚಿಸಿ ವಿಲಯದಲಿ
ಮೂರು ರೂಪೊಂದಾಗಿ ಪ್ರಳಯದ
ವಾರಿಯಲಿ ವಟಪತ್ರಶಯನದಿ
ಸೇರಿದವ ನೀನೀಗ ರಕ್ಷಿಸು ನಮ್ಮನನವರತ ॥೭೪॥
ನೀರ ಮೇಲಣ ಗುಳ್ಳೆಯಂದದಿ
ತೋರಿಯಡಗುವ ದೇಹವೀ ಸಂ
ಸಾರ ಬಹಳಾರ್ಣವದೊಳಗೆ ಮುಳುಗಿದೆನು ಪತಿಕರಿಸಿ
ತೋರಿಸಚಲಾನಂದಪದವಿಯ
ಸೇರಿಸಕಟಾ ನಿನ್ನವೋಲ್ ನಮ
ಗಾರು ಬಾಂಧವರುಂಟು ರಕ್ಷಿಸು ನಮ್ಮನನವರತ ॥೭೫॥
ಹೊದ್ದಿ ನಿಲುವುದೆ ದರ್ಪಣದ ಮೇ
ಲುದ್ದುರುಳಿ ಬೀಳ್ವಂತೆ ನಿಮಿಷದಿ
ಬಿದ್ದುಹೋಗುವ ಕಾಯವೀ ತನುವೆಂಬ ಪಾಶದಲಿ
ಬದ್ಧನಾದೆನು ಮಮತೆಯಲಿ ನೀ
ನಿರ್ದುದಕೆ ಫಲವೇನು ಭಕ್ತವಿ
ರುದ್ಧವಾಗದವೋಲು ರಕ್ಷಿಸು ನಮ್ಮನನವರತ ॥೭೬॥
ಕೇಳುವುದು ಕಡುಕಷ್ಟ ಕಷ್ಟದ
ಬಾಳುವೆಯ ಬದುಕೇನು ಸುಡುಸುಡು
ಗಾಳಿಗೊಡ್ಡಿದ ಸೊಡರು ಈ ಸಂಸಾರದೇಳಿಗೆಯು
ಬಾಳಬೇಕೆಂಬವಗೆ ನೆರೆ ನಿ
ನ್ನೂಳಿಗವ ಮಿಗೆ ಮಾಡಿ ಭಕ್ತಿಯೊ
ಳಾಳಿ ಬದುಕುವುದುಚಿತ ರಕ್ಷಿಸು ನಮ್ಮನನವರತ ॥೭೭॥
ದೇಹಧಾರಕನಾಗಿ ಬಹುವಿಧ
ಮೋಹದೇಳಿಗೆಯಾಗಿ ಮುಕುತಿಗೆ
ಬಾಹಿರನು ತಾನಾಗಿ ವಿಷಯಾದಿಗಳಿಗೊಳಗಾಗಿ
ಹೇಯವೀ ಸಂಸಾರವೆನ್ನದೆ
ಮೋಹಿಸುವ ಮತಿಗೇಡಿ ಮಾನವ
ಸಾಹಸಿಯೆ ಸಟೆಮಾತು ರಕ್ಷಿಸು ನಮ್ಮನನವರತ ॥೭೮॥
ಅಳಿವ ಒಡಲನು ನೆಚ್ಚಿವಿಷಯಂ
ಗಳಿಗೆ ಕಾತುರನಾಗಿ ಮಿಗೆ ಕಳ
ವಳಿಸಿ ಕಾಲನ ಬಳಿಗೆ ಹಂಗಿಗನಾಗಿ ಬಾಳುವರೆ
ತಿಳಿದು ಮನದೊಳು ನಿನ್ನ ನಾಮಾ
ವಳಿಯ ಜಿಹ್ವೆಗೆ ತಂದುಪಾಪವ
ಕಳೆದ ಬದುಕೇ ಲೇಸು ರಕ್ಷಿಸು ನಮ್ಮನನವರತ ॥೭೯॥
ವರುಷ ನೂರಾಯುಷ್ಯವದರೊಳ
ಗಿರುಳು ಕಳೆದೈವತ್ತು ಐವ
ತ್ತರಲಿ ವಾರ್ಧಿಕ ಬಾಲ್ಯ ಕೌಮಾರದಲಿ ಮೂವತ್ತು
ಇರದೆ ಸಂದುದು ಬಳಿಕವಿಪ್ಪ
ತ್ವರುಷವದರೊಳಗಾದುದಂತಃ
ಕರಣ ನಿನ್ನೊಳು ತೋರಿ ರಕ್ಷಿಸು ನಮ್ಮನನವರತ ॥೮೦॥
ಊರು ತನಗೊಂದಿಲ್ಲ ಹೊತ್ತ ಶ
ರೀರಗಳ ಮಿತಿಯಿಲ್ಲ ತಾ ಸಂ
ಚಾರಿಸದ ಸ್ಥಳವಿಲ್ಲ ನುಡಿಯದ ಭಾಷೆ ಮತ್ತಿಲ್ಲ
ಬೇರೆ ಹೊಸತೊಂದಿಲ್ಲ ಉಣ್ಣದ
ಸಾರ ವಸ್ತುಗಳಿಲ್ಲ ತನುಸಂ
ಚಾರವೀ ಬಗೆಯಾಯ್ತು ರಕ್ಷಿಸು ನಮ್ಮನನವರತ ॥೮೧॥
ಗೋಪುರದ ಭಾರವನು ಗಾರೆಯ
রূপದೋರಿದ ಪ್ರತಿಮೆಯಂದದೊ
ಳೀಪರಿಯ ಸಂಸಾರಭಾರವನಾರು ತಾಳುವರು
ತಾ ಪರಾಕ್ರಮಿಯೆಂದು ಮನುಜನು
ಕಾಪಥವನೈದುವನು ವಿಶ್ವ
ವ್ಯಾಪಕನು ನೀನಹುದು ರಕ್ಷಿಸು ನಮ್ಮನನವರತ ॥೮೨॥
ಬೀಜವೃಕ್ಷದೊಳಾಯ್ತು ವೃಕ್ಷಕೆ
ಬೀಜವಾರಿಂದಾಯ್ತು ಲೋಕದಿ
ಬೀಜವೃಕ್ಷ ನ್ಯಾಯವಿದ ಭೇದಿಸುವರಾರಿನ್ನು
ಸೋಜಿಗವ ನೀ ಬಲ್ಲೆ ನಿನ್ನೊಳು
ರಾಜಿಸುತ ಮೊಳೆದೋರುವುದು ಸುರ
ರಾಜನಂದನನಮಿತ ರಕ್ಷಿಸು ನಮ್ಮನನವರತ ॥೮೩॥
ತೊಗಲು ಬೊಂಬೆಗಳಂತೆ ನಾಲಕು
ಬಗೆಯ ನಿರ್ಮಾಣದಲಿ ಇದರೊಳು
ನೆಗಳಿದೀ ಚೌಷಷ್ಟಿ ಲಕ್ಷಣ ಜಾತಿ ಧರ್ಮದಲಿ
ಬಗೆಬಗೆಯ ನಾಮಾಂಕಿತದ ಜೀ
ವಿಗಳದೆಲ್ಲವು ನಿನ್ನ ನಾಮದಿ
ಜಗಕೆ ತೋರುತ್ತಿಹುದು ರಕ್ಷಿಸು ನಮ್ಮನನವರತ ॥೮೪॥
ಹೂಡಿದೆಲು ಮರಮುಟ್ಟು ಮಾಂಸದ
ಗೋಡೆ ಚರ್ಮದ ಹೊದಿಕೆ ನರವಿನ
ಕೂಡೆ ಹಿಂಡಿಗೆ ಬಿಗಿದ ಮನೆಯೊಳಗಾತ್ಮ ನೀನಿರಲು
ಬೀಡು ತೊಲಗಿದ ಬಳಿಕಲಾ ಸುಡು
ಗಾಡಿನಲಿ ಬೆಂದುರಿವ ಕೊಂಪೆಯ
ನೋಡಿ ನಂಬಿರಬಹುದೆ ರಕ್ಷಿಸು ನಮ್ಮನನವರತ ॥೮೫॥
ಬೀಗಮುದ್ರೆಗಳಿಲ್ಲದೂರಿಗೆ
ಬಾಗಿಲುಗಳೊಂಭತ್ತು ಹಗಲಿರು
ಳಾಗಿ ಮುಚ್ಚದೆ ತೆರೆದಿಹುದು ಜೀವಾತ್ಮ ತಾನಿರುತ
ನೀಗಿಯೆಲ್ಲವ ಬಿಸುಟು ಬೇಗದಿ
ಹೋಗುತಿಹ ಸಮಯದಲಿ ಇವರವ
ರಾಗಬಲ್ಲರೆ ನೀನೆ ರಕ್ಷಿಸು ನಮ್ಮನನವರತ ॥೮೬॥
ಕೀಲು ಬಲಿದಿಹದೈದು ತಿರುಗುವ
ಗಾಲಿಯೆರಡರ ರಥಕೆ ತ್ರೈಗುಣ
ಶೀಲನೋರ್ವನು ಸಂಚರಿಸುತಿಹನಾ ರಥಾಗ್ರದಲಿ
ಕೀಲು ಕಡೆಗೊಂದೂಡಿ ಬೀಳಲು
ಕಾಲಗತಿ ತಪ್ಪುವುದು ಅದರನು
ಕೂಲ ನಿನ್ನೊಳಗಿಹುದು ರಕ್ಷಿಸು ನಮ್ಮನನವರತ ॥೮೭॥
ಬಿಗಿದ ರಕುತದ ರೋಮಕೂಪದ
ತೊಗಲ ಕೋಟೆಯ ನಂಬಿ ರೋಗಾ
ದಿಗಳ ಮುತ್ತಿಗೆ ಬಲಿದು ಜೀವನ ಪಿಡಿಯಲನುವಾಯ್ತು
ವಿಗಡ ಯಮನಾಳುಗಳು ಬರುತಿರೆ
ತೆಗೆದು ಕಾಲನ ಬಲವ ಬಲು ಮು
ತ್ತಿಗೆಯನಿದ ಪರಿಹರಿಸಿ ರಕ್ಷಿಸು ನಮ್ಮನನವರತ ॥೮೮॥
ವಾರಣಗಳೆಂಟೆಸೆವ ಮನೆಗೆ
ದ್ವಾರವೊಂಭತ್ತದಕೆ ಬಲು ಮೊನೆ
ಗಾರರಾದಾಳುಗಳ ಕಾವಲುಗಾರರನು ಮಾಡಿ
ಆರರಿಯದಂತದರೊಳಗೆ ಹೃದ
ಯಾರವಿಂದದಿ ನೀನಿರಲು ಬರಿ
ದೂರು ಜೀವನಿಗುಂಟೆ ರಕ್ಷಿಸು ನಮ್ಮನನವರತ ॥೮೯॥
ಪೇಳಲೆನ್ನಳವಲ್ಲವೀಗೆಮ
ನಾಳುಗಳು ನೆರೆಯಂಗದೇಶವ
ಧಾಳಿಮಾಡುವರಕಟಕಟ ಸೆರೆಸೂರೆಗಳ ಪಿಡಿದು
ಕಾಳುಮಾಡುವರಿನ್ನು ತನುವಿದು
ಬಾಳಲರಿಯದು ಕೋಟೆಯವರಿಗೆ
ಕೋಳುಹೋಗದ ಮುನ್ನ ರಕ್ಷಿಸು ನಮ್ಮನನವರತ ॥೯೦॥
ನಾಲಿಗೆಯು ನಾಸಿಕವು ನಯನ
ಕಪಾಲ ಪದ ಪಾಣಿಗಳು ತನುವಿನ
ಮೂಲಕರ್ತವಿನಲ್ಲಿ ಪರಿಚಾರಕರು ತಾವಾಗಿ
ಲೀಲೆಯಿಂದಿರುತಿರ್ದು ಕಡೆಯಲಿ
ಕಾಲ ತೀರಿದ ಬಳಿಕಲದರನು
ಕೂಲ ನಿನ್ನೊಳಗಿಹುದು ರಕ್ಷಿಸು ನಮ್ಮನನವರತ ॥೯೧॥
ಸತ್ತವರಿಗಳಲೇಕೆ ತನ್ನನು
ಹೊತ್ತವರು ಪೆತ್ತವರುಗಳು ತಾ
ಸತ್ತು ಹೋಗುವರಲ್ಲದುಳಿದವರೆ ಮರುಗಲೇಕಿನ್ನು
ಮೃತ್ಯು ಬೆನ್ನಿನೊಳಿಹುದು ತಾವಿ
ನ್ನತ್ತು ಮಾಡುವುದೇನು ಪೂರ್ವದ
ತೆತ್ತಿಗನು ನೀನೀಗ ರಕ್ಷಿಸು ನಮ್ಮನನವರತ ॥೯೨॥
ಮಣ್ಣು ಮಣ್ಣಿನೊಳುದಿಸಲದರಲಿ
ಮಣ್ಣು ಗೊಂಬೆಗಳಾಗಿ ರಂಜಿಸಿ
ಮಣ್ಣಿನಾಹಾರದಲಿ ಜೀವವ ಹೊರೆದು ಉಪಚರಿಸಿ
ಮಣ್ಣಿನಲಿ ಬಂಧಿಸಿದ ದೇಹವ
ಮಣ್ಣುಗೂಡಿಸಬೇಡ ಜ್ಞಾನದ
ಕಣ್ಣದೃಷ್ಟಿಯನಿತ್ತು ರಕ್ಷಿಸು ನಮ್ಮನನವರತ ॥೯೩॥
ಬೀಯವಾಗುವ ತನುವಿನಲಿ ನಿ
ರ್ದಾಯಕನು ನೀನಿರ್ದು ಅತಿ ಹಿರಿ
ದಾಯ ಸಂಬಡಿಸುವರೆ ನೀನನುಕೂಲವಾಗಿರ್ದು
ತಾಯನಗಲಿದ ಶಿಶುವಿನಂದದಿ
ಬಾಯಬಿಡುವಂತಾಯ್ತೆ ಚಿಂತಾ
ದಾಯಕನೆ ಬಿಡಬೇಡ ರಕ್ಷಿಸು ನಮ್ಮನನವರತ ॥೯೪॥
ಮೊದಲು ಜನನವನರಿಯೆ ಮರಣದ
ಹದನ ಕಡೆಯಲಿ ತಿಳಿಯೆ ನಾ ಮ
ಧ್ಯದಲಿ ನೆರೆ ನಾ ನಿಪುಣನೆಂಬುದು ಬಳಿಕ ನಗೆಗೇಡು
ಮೊದಲು ಕಡೆ ಮಧ್ಯಗಳ ಬಲ್ಲವ
ಮದನಜನಕನು ನೀನು ನಿನ್ನಯ
ಪದಯುಗವ ಬಯಸುವೆನು ರಕ್ಷಿಸು ನಮ್ಮನನವರತ ॥೯೫॥
ಸಾರವಿಲ್ಲದ ದೇಹವಿದು ನಿ
ಸ್ಸಾರವಾಗಿಹ ತನುವಿನಲಿ ಸಂ
ಚಾರಿಯಹ ನೀನಿರ್ದು ಕಡೆಯಲಿ ತೊಲಗಿಹೋಗುತಲಿ
ದೂರ ತಪ್ಪಿಸಿಕೊಂಡು ಬರಿಯಪ
ದೂರ ಹೊರಿಸಿದ ಜೀವನಲಿ ಇದ
ನಾರು ಮೆಚ್ಚುವರಕಟ ರಕ್ಷಿಸು ನಮ್ಮನನವರತ ॥೯೬॥
ಅಂಡವೆರಡುದ್ಭವಿಸಿದವು
ಬ್ರಹ್ಮಾಂಡವದರೊಪಾದಿಯಲಿ ಪಿಂ
ಡಾಂಡವೆಸೆದುದು ಸ್ಥೂಲಕಾರಣ ಸೂಕ್ಷ್ಮತನುವಿನಲಿ
ಅಂಡ ನಿನ್ನಯ ರೋಮಕೂಪದೊ
ಳಂಡಲೆದವಖಿಲಾಂಡವಿದು ಬ್ರ
ಹ್ಮಾಂಡನಾಯಕ ನೀನು ರಕ್ಷಿಸು ನಮ್ಮನನವರತ ॥೯೭॥
ಒಂದು ದಿನ ತನುವಿನಲಿ ನಡೆವುದು
ಇಂದುಭಾಸ್ಕರ ಸ್ವರಗಳಿಪ್ಪ
ತ್ತೊಂದು ಸಾವಿರದಾರುನೂರನು ಏಳುಭಾಗದಲಿ
ಬಂದದನು ಉಡುಚಕ್ರದಲ್ಲಿಗೆ
ತಂದು ಧಾರೆಯನೆರೆದ ಮುನಿಕುಲ
ವೃಂದಹೃದಯನು ನೀನು ರಕ್ಷಿಸು ನಮ್ಮನನವರತ ॥೯೮॥
ತೊಲಗುವರು ಕಡೆಕಡೆಗೆ ತಾ ಹೊಲೆ
ಹೊಲೆಯೆನುತ ಕಳವಳಿಸಿ ಮೂತ್ರದ
ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು
ಜಲದೊಳಗೆ ಮುಳುಗಿದರೆ ತೊಲಗದು
ಹೊಲೆಗೆಲಸವೀ ದೇಹದೊಳು ನೀ
ನೆಲೆಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ ॥೯೯॥
ಬರಿದಹಂಕಾರದಲಿ ತತ್ವದ
ಕುರುಹ ಕಾಣದೆ ನಿನ್ನ ದಾಸರ
ಜರಿದು ವೇದ ಪುರಾಣ ಶಾಸ್ತ್ರಗಳೋದಿ ಫಲವೇನು
ನರರು ದುಷ್ಕರ್ಮದಲಿ ಮಾಡಿದ
ದುರಿತವಡಗಲು ನಿನ್ನ ನಾಮ
ಸ್ಮರಣೆಯೊಂದೇ ಸಾಕು ರಕ್ಷಿಸು ನಮ್ಮನನವರತ ॥೧೦೦॥
ಎಂಜಲೆಂಜಲು ಎಂಬರಾ ನುಡಿ
ಎಂಜಲಲ್ಲವೆ ವಾರಿ ಜಲಚರ
deಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆ
ಎಂಜಲೆಲ್ಲಿಯದೆಲ್ಲಿಯುಂ ಪರ
ರೆಂಜಲಲ್ಲದೆ ಬೇರೆ ಭಾವಿಸ
ಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ ॥೧೦೧॥
ಕೇಳುವುದು ಹರಿಕಥೆಯ ಕೇಳಲು
ಹೇಳುವುದು ಹರಿಭಕ್ತಿ ಮನದಲಿ
ತಾಳುವುದು ಹಿರಿದಾಗಿ ನಿನ್ನಯ ಚರಣಸೇವೆಯಲಿ
ಊಳಿಗವ ಮಾಡುವುದು ವಿಷಯವ
ಹೂಳುವುದು ನಿಜ ಮುಕ್ತಿಕಾಂತೆಯ
ನಾಳುವುದು ಕೃಪೆಮಾಡಿ ರಕ್ಷಿಸು ನಮ್ಮನನವರತ ॥೧೦೨॥
ಈ ತೆರದೊಳಚ್ಚ್ಯುತನ ನಾಮವ
ನೂತನದಿ ವಸುಧಾತಲದಿ ವಿ
ಖ್ಯಾತಿ ಬಯಸದೆ ಬಣ್ಣಿಸಿದೆ ಭಾಮಿನಿಯ ವೃತ್ತದಲಿ
ನೀತಿಕೋವಿದರಾಲಿಸುವದತಿ
ಪ್ರೀತಿಯಲಿ ಕೇಳ್ದರಿಗೆಯಸುರಾ
ರಾತಿ ಚೆನ್ನಿಗರಾಯ ಸುಖಗಳನೀವನನವರತ ॥೧೦೩॥
ಬಾದರಾಯಣ ಪೇಳ್ದ ಭಾರತ
ಕಾದಿಕರ್ತನುದಾರ ಶ್ರೀಪುರ
ದಾದಿ ಕೇಶವಮೂರ್ತಿಗಂಕಿತವಾದ ಚರಿತೆಯನು
ಮೇದಿನಿಯೊಳಿದನಾರು ಹೃದಯದೊ
ಳಾದರಿಸಿ ಕೇಳ್ದಪರು ಮುದದಲಿ
ಯಾದಿಮೂರುತಿ ವರಪುರಾಧಿಪನೊಲಿವನನವರತ ॥೧೦೪॥
ಕುಲಗಿರಿಗಳನ್ವಯವ ಧಾರಿಣಿ
ಜಲಧಿ ಪಾವಕ ಮರುತ ಜಲ ನಭ
ಜಲಜಸಖ ಶೀತಾಂಶu ತಾರೆಗಳುಳ್ಳ ಪರಿಯಂತ
ಚಲನೆಯಿಲ್ಲದ ನಿನ್ನ ಚರಿತೆಯು
ಒಲಿದು ಧರೆಯೊಳಗೊಪ್ಪುವಂದದಿ
ಚೆಲುವ ಚೆನ್ನಿಗರಾಯ ರಕ್ಷಿಸು ನಮ್ಮನನವರತ ॥೧೦೫॥
ನೂರುಕನ್ಯಾದಾನವನು ಭಾ
ಗೀರಥೀಸ್ನಾನವನು ಮಿಗೆ ಕೈ
ಯಾರೆ ಗೋವ್ಗಳ ಪ್ರೇಮದಿಂದಲಿ ಭೂಸುರರಿಗೊಲಿದು
ಊರುಗಳ ನೂರಗ್ರಹಾರವ
ಧಾರೆಯೆರೆದಿತ್ತಂತೆ ಫಲ ಕೈ
ಸೇರುವುದು ಹರಿಭಕ್ತಿಸಾರದ ಕಥೆಯ ಕೇಳ್ದವಗೆ ॥೧೦೬॥
ಮೇರು ಮಂದರನಿಭಸುವರ್ಣವ
ವಾರಿಮಧ್ಯದೊಳಿರುವ ಅವನಿಯ
ನಾರಿಯರ ಗಾಯತ್ರಿ ಪಶುಗಳನಿತ್ತ ಫಲವಹುದು
ಧಾರಿಣಿಯೊಳೀ ಭಕ್ತಿಸಾರವ
ನಾರು ಓದುವರವರಿಗನುದಿನ
ಚಾರು ವರಗಳನಿತ್ತು ರಕ್ಷಿಪನಾದಿಕೇಶವನು ॥೧೦೭॥
ಲೋಕದೊಳಗತ್ಯಧಿಕನೆನಿಸುವ
ಕಾಗಿನೆಲೆ ಸಿರಿಯಾದಿಕೇಶವ
ತಾ ಕೃಪೆಯೊಳಗೆ ನುಡಿಸಿದನು ಈ ಭಕ್ತಿಸಾರವನು
ಜೋಕೆಯಲಿ ಬರೆದೋದಿಕೇಳ್ದರ
ನಾಕುಲದಿ ಮಾಧವನು ಕರುಣಿಪ
ಶ್ರೀಕಮಲವಲ್ಲಭನು ಮಿಗೆ ಬಿಡದಾದಿಕೇಶವನು ॥೧೦೮॥
ಮಂಗಳಂ ಸರ್ವಾದಿಭೂತಗೆ
ಮಂಗಳಂ ಸರ್ವವನು ಪೊರೆವಗೆ
ಮಂಗಳಂ ತನ್ನೊಳಗೆ ಲೋಕವ ಲಯಿಸಿಕೊಂಬವಗೆ
ಮಂಗಳಂ ಸರ್ವಸ್ವತಂತ್ರಗೆ
ಮಂಗಳಂ ಸತ್ಯಸ್ವರೂಪಗೆ
ಮಂಗಳಂ ಸಿರಿಗೊಡೆಯ ಚೆನ್ನಿಗರಾಯ ಕೇಶವಗೆ ॥
ಮಂಗಳಂ ಜಗದಾದಿ ಮೂರ್ತಿಗೆ
ಮಂಗಳಂ ಶ್ರಿತಪುಣ್ಯಕೀರ್ತಿಗೆ
ಮಂಗಳಂ ಕರಕಲಿತಚಕ್ರವಿದಳಿತನಕ್ರನಿಗೆ
ಮಂಗಳಂ ದ್ರೌಪದಿಯ ಪೊರೆದಗೆ
ಮಂಗಳಂ ಧ್ರುವರಾಜಗೊಲಿದಗೆ
ಮಂಗಳಂ ಬೇಲೂರ ಚೆನ್ನಿಗರಾಯ ಕೇಶವಗೆ ॥
ಜಯ ಸುರೇಂದ್ರವರಾರ್ಚಿತಾಂಘ್ರಿಯೆ
ಜಯ ಪುರಾಧಿಪಸಂಸ್ತುತಾತ್ಮನೆ
ಜಯ ಮಹಾಮುನಿಯೋಗಗಮ್ಯನೆ ಮೇಘಮೇಚಕನೆ
ಜಯ ಜನಕಜೆಮುಖಾಬ್ಜಮಿತ್ರನೆ
ಜಯ ಕಲಾಧಿಪಸೂರ್ಯನೇತ್ರನೆ
ಜಯ ಜಯ ಜಗನ್ನಾಥದೇವನೆ ಚೆನ್ನಕೇಶವನೆ ॥