ವ್ಯಾಪ್ತಿ ಸಂಧಿ
ಜಗನ್ನಾಥದಾಸರುಹರಿಕಥಾಮೃತಸಾರ ಗುರುಗಳ
ಕರುಣದಿಂದಾಪನಿತು ಪೇಳುವೆ ।
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ॥
ಪುರುಷರೂಪತ್ರಯ ಪುರಾತನ
ಪುರುಷ ಪುರುಷೋತ್ತಮ ಕ್ಷರಾಕ್ಷರ
ಪುರುಷಪೂಜಿತಪಾದ ಪೂರ್ಣಾನಂದ ಜ್ಞಾನಮಯಾ ।
ಪುರುಷಸೂಕ್ತ ಸುಮೇಯ ತತ್ತ-
ತ್ಪುರುಷ ಹೃತ್ಪುಷ್ಕರನಿಲಯ ಮಹ-
ಪುರುಷ ಜಾಂಡಾಂತರದಿ ಬಹಿರದಿ ವ್ಯಾಪ್ತ ನಿರ್ಲಿಪ್ತ ॥1॥
ಸ್ತ್ರೀನಪುಂಸಕಪುರುಷ ಭೂಸಲಿ-
ಲಾನಲಾನಿಲಗಗನಮನ ಶಶಿ-
ಭಾನು ಕಾಲಗುಣ ಪ್ರಕೃತಿಯೊಳಗೊಂದು ತಾನಲ್ಲ ।
ಏನು ಇವನ ಮಹಾಮಹಿಮೆ ಕಡೆ-
ಗಾಣರಜಭವ ಶಕ್ರಮುಖರು ನಿ-
ಧಾನಿಸಲು ಮಾನವರಿಗಳವಡುವುದೆ ವಿಚಾರಿಸಲು ॥2॥
ಗಂಧರಸ ರೂಪಸ್ಪರುಶ ಶ-
ಬ್ದೊಂದು ತಾನಲ್ಲದರದರ ಪೆಸ-
ರಿಂದ ಕರೆಸುತ ಜೀವರಿಗೆ ತರ್ಪಕನು ತಾನಾಗಿ ।
ಪೊಂದಿಕೊಂಡಿಹ ಪರಮ ಕರುಣಾ-
ಸಿಂಧು ಶಾಶ್ವತ ಮನವೆ ಮೊದಲಾ-
ದಿಂದ್ರಿಯಗಳೊಳಗಿದ್ದು ಭೋಗಿಸುತಿಹನು ವಿಷಯಗಳ ॥3॥
ಶ್ರವಣ ನಯನ ಘ್ರಾಣತ್ವಗ್ರಸ-
ನಿವುಗಳೊಳು ವಾಕ್ಪಾಣಿ ಪಾದಾ-
ದ್ಯವಯವಗಳೊಳು ತದ್ಗುಣಗಳೊಳು ತತ್ಪತಿಗಳೊಳಗೆ ।
ಪ್ರವಿತತನು ತಾನಾಗಿ ಕೃತಿಪತಿ
ವಿವಿಧಕರ್ಮವ ಮಾಡಿಮಾಡಿಸಿ
ಭವಕೆ ಕಾರಣನಾಗಿ ತಿರುಗಿಸುತಿಹನು ತಿಳಿಸದಲೆ ॥4॥
ಗುಣಿ ಗುಣಗಳೊಳಗಿದ್ದು ಗುಣಿಗುಣ-
ನೆನಿಸುವನು ಗುಣಬದ್ಧನಾಗದೆ
ಗುಣಜ ಪುಣ್ಯಾಪುಣ್ಯಫಲ ಬ್ರಹ್ಮಾದಿಚೇತನಕೆ ।
ಉಣಿಸುತವರೊಳಗಿದ್ದು ವೃಜಿನಾ-
ರ್ದನ ಚಿದಾನಂದೈಕ ದೇಹನು
ಕೊನೆಗೆ ಸಚರಾಚರ ಜಗದ್ಭುಕುವೆನಿಪನವ್ಯಯನು ॥5॥
ವಿದ್ಯೆ ತಾನೆಂದೆನಿಸಿಕೊಂಬನಿ-
ರುದ್ಧ ದೇವನು ಸರ್ವಜೀವರ
ಬುದ್ಧಿಯಲಿ ನೆಲೆಸಿದ್ದು ಕೃತಿಪತಿ ಬುದ್ಧಿಯೆನಿಸುವನು ।
ಸಿದ್ಧಿಯೆನಿಸುವ ಸಂಕರುಷಣ ಪ್ರ-
ಸಿದ್ಧನಾಮಕ ವಾಸುದೇವನ-
ವದ್ಯರೂಪ ಚತುಷ್ಟಯಗಳರಿತವನೆ ಪಂಡಿತನು ॥6॥
ತನುಚತುಷ್ಟಯಗಳೊಳು ನಾರಾ-
ಯಣನು ಹೃತ್ಕಮಲಾಖ್ಯ ಸಿಂಹಾ-
ಸನದೊಳನಿರುದ್ಧಾದಿ ರೂಪಗಳಿಂದ ಶೋಭಿಸುತ ।
ತನಗೆ ತಾನೇ ಸೇವ್ಯಸೇವಕ-
ನೆನಿಸಿ ಸೇವಾಸಕ್ತ ಸುರರೊಳ-
ಗನವರತ ನೆಲೆಸಿದ್ದು ಸೇವೆಯ ಕೊಂಬನವರಂತೆ ॥7॥
ಜಾಗರ ಸ್ವಪ್ನಂಗಳೊಳು ವರ-
ಭೋಗಿಶಯನ ಬಹುಪ್ರಕಾರ ವಿ-
ಭಾಗಗೈಸಿ ನಿರಂಶಜೀವರ ಚಿಚ್ಛರೀರವನು ।
ಭೋಗವಿತ್ತು ಸುಷುಪ್ತಿಕಾಲದಿ
ಸಾಗರವ ನದಿ ಕೂಡುವಂತೆ ವಿ-
ಯೋಗರಹಿತನು ಅಂಶಗಳನೇಕತ್ರವೈದಿಸುವ ॥8॥
ಭಾರ್ಯರಿಂದೊಡಗೂಡಿ ಕಾರಣ
ಕಾರ್ಯವಸ್ತುಗಳಲ್ಲಿ ಪ್ರೇರಕ
ಪ್ರೇರ್ಯರೂಪಗಳಿಂದ ಪಟತಂತುಗಳವೋಲಿದ್ದು ।
ಸೂರ್ಯಕಿರಣಗಳಂತೆ ತನ್ನಯ
ವೀರ್ಯದಿಂದಲೆ ಕೊಡುತ ಕೊಳುತಿಹ-
ಾರ್ಯರಿಗೆ ಈತನ ವಿಹಾರವು ಗೋಚರಿಪುದೇನೋ ॥9॥
ಜನಕ ತನ್ನಾತ್ಮಜಗೆ ವರಭೂ-
ಷಣ ದುಕೂಲವ ತೊಡಿಸಿ ತಾ ವಂ-
ದನೆಯ ಕೈಕೊಳುತವನ ಹರಸುತ ಹರುಷಪಡುವಂತೆ ।
ವನರುಹೇಕ್ಷಣ ಪೂಜ್ಯಪೂಜಕ-
ನೆನಿಸಿ ಪೂಜಾಸಾಧನ ಪದಾ-
ರ್ಥನು ತನಗೆ ತಾನಾಗಿ ಫಲಗಳನೀವ ಭಜಕರಿಗೆ ॥10॥
ತಂದೆ ಬಹುಸಂಭ್ರಮದಿ ತನ್ನಯ
ಬಂಧುಬಳಗವ ನೆರಹಿ ಮದುವೆಯ
ನಂದನಗೆ ತಾಮಾಡಿ ಮನೆಯೊಳಗಿಡುವ ತೆರನಂತೆ ।
ಇಂದಿರಾಧವ ತನ್ನ ಇಚ್ಛೆಗ-
ಳಿಂದೆ ಗುಣಗಳ ಚೇತನಕೆ ಸಂ-
ಬಂಧಗೈಸಿ ಸುಖಾಸುಖಾತ್ಮಕ ಸಂಸ್ಕೃತಿಯೊಳಿಡುವ ॥11॥
ತೃಣಕೃತಾಲಯದೊಳಗೆ ಪೊಗೆ ಸಂ-
ದಣಿಸಿ ಪ್ರತಿಛಿದ್ರದಲಿ ಪೊರಮ-
ಟ್ಟನಲನಿರವನು ತೋರಿತೋರದಲಿಪ್ಪ ತೆರನಂತೆ ।
ವನಜಜಾಂಡದೊಳಖಿಳಜೀವರ
ತನುವಿನೊಳ ಹೊರಗಿದ್ದು ಕಾಣಿಸ-
ದನಿಮಿಷೇಶನು ಸಕಲಕರ್ಮವ ಮಾಳ್ಪನವರಂತೆ ॥12॥
ಪಾದಪಗಳಡಿಗೆರೆಯೆ ಸಲಿಲವು
ತೋದು ಕೊಂಬೆಗಳುಬ್ಬಿ ಪುಷ್ಪ-
ಸ್ವಾದುಫಲವೀವಂದದಲಿ ಸರ್ವೇಶ್ವರನು ಜನರ ।
ಆರಾಧನೆಯ ಕೈಕೊಂಡು ಬ್ರಹ್ಮ ಭ-
ವಾದಿಗಳ ನಾಮದಲಿ ಫಲವಿ-
ತ್ತಾದರಿಸುವನು ತನ್ನ ಮಹಿಮೆಯ ತೋರಗೊಡ ಜಗಕೆ ॥13॥
ಶ್ರುತಿತತಿಗಳಿಗೆ ಗೋಚರಿಸದ-
ಪ್ರತಿಮಜಾನಂದಾತ್ಮನಚ್ಯುತ
ವಿತತ ವಿಶ್ವಾಧಾರ ವಿದ್ಯಾಧೀಶ ವಿಧಿಜನಕ ।
ಪ್ರತಿದಿವಸ ಚೇತನರೊಳಗೆ ಪ್ರಾಕೃತ
ಪುರುಷನಂದದಲಿ ಸಂಚರಿ-
ಸುತ ನಿಯಮ್ಯ ನಿಯಾಮಕನು ತಾನಾಗಿ ಸಂತೈಪ ॥14॥
ಮನವಿಷಯದೊಳಗಿರಿಸಿ ವಿಷಯವ
ಮನದೊಳಗೆ ನೆಲೆಗೊಳಿಸಿ ಬಲು ನೂ-
ತನವು ಸುಸಮೀಚೀನವಿದುಪಾದೇಯವೆಂದರುಪಿ ।
ಕನಸಿಲಾದರು ತನ್ನ ಪಾದದ
ನೆನವನೀಯದೆ ಸರ್ವರೊಳಗಿ-
ದ್ದನುಭವಿಸುವನು ಸ್ಥೂಲವಿಷಯವ ವಿಶ್ವನೆಂದೆನಿಸಿ ॥15॥
ತೋದಕನು ತಾನಾಗಿ ಮನಮೊದ-
ಾದ ಕರಣದೊಳಿದ್ದು ವಿಷಯವ-
ನೈದುವನು ನಿಜಪೂರ್ಣಸುಖಮಯ ಗ್ರಾಹ್ಯಗ್ರಾಹಕನು ।
ವೇದವೇದ್ಯನು ತಿಳಿಯದವನೋ-
ಪಾದಿ ಭುಂಜಿಸುತೆಲ್ಲರೊಳಗಾ-
ಹ್ಲಾದಬಡುವನು ಭಕ್ತವತ್ಸಲ भाग್ಯಸಂಪನ್ನ ॥16॥
ನಿತ್ಯನಿಗಮಾತೀತ ನಿರ್ಗುಣ
ಭೃತ್ಯವತ್ಸಲ ಭಯವಿನಾಶನ
ಸತ್ಯಕಾಮ ಶರಣ್ಯಶಾಮಲ ಕೋಮಲಾಂಗ ಸುಖೀ ।
ಮತ್ತನಂದದಿ ಮರ್ತ್ಯರೊಳ ಹೊರ-
ಗೆತ್ತ ನೋಡಲು ಸುತ್ತಲಿಪ್ಪನು
ಅತ್ಯಧಿಕ ಸಂತೃಪ್ತ ತ್ರಿಜಗದ್ವ್ಯಾಪ್ತ ನಿರ್ಲಿಪ್ತ ॥17॥
ಪವಿಹರಿನ್ಮಣಿವಿದ್ರುಮದ ಸ-
ಚ್ಛವಿಗಳಂದದಿ ರಾಜಿಸುತ ಮಾ-
ಧವ ನಿರಂತರ ದೇವದಾನವಮಾನವರೊಳಿದ್ದು ।
ತ್ರಿವಿಧ ಗುಣಕರ್ಮ ಸ್ವಭಾವವ
ಪವನಮುಖದೇವಾಂತರಾತ್ಮಕ
ದಿವಸದಿವಸದಿ ವ್ಯಕ್ತಮಾಡುತಲವರೊಳಿದ್ದುಣಿಪ ॥18॥
ಅಣುಮಹತ್ತಿನೊಳಿಪ್ಪ ಘನ ಪರ-
ಮಾಣುವಿನೊಳಡಗಿಸುವ ಸೂಕ್ಷ್ಮವ
ಮುಣುಗಿಸುವ ತೇಲಿಸುವ ಸ್ಥೂಲಗಳವನ ಮಾಯವಿದು ।
ದನುಜರಕ್ಕಸರೆಲ್ಲರಿವನೊಳು
ಮುನಿದು ಮಾಡುವುದೇನು ಲೂಖಲ
ಒನಕೆಗಳು ಧಾನ್ಯಗಳ ಹಣಿವಂದದಲಿ ಸಂಹರಿಪ ॥19॥
ದೇವ ಮಾನವ ದಾನವರು ಎಂ-
ದೀ ವಿಧದಲಾವಾಗಲಿಪ್ಪರು
ಮೂವರೊಳಗಿವಗಿಲ್ಲ ಸ್ನೇಹೋದಾಸಿನ ದ್ವೇಷ ।
ಜೀವರಧಿಕಾರಾನುಸಾರದ-
ಲೀವ ಸುಖಸಂಸಾರ ದುಃಖವ
ತಾ ಉಣದಲವರವರಿಗುಣಿಸುವ ನಿರ್ಗತಾಶನನು ॥20॥
ಎಲ್ಲಿ ಕೇಳಿದರೆಲ್ಲಿ ನೋಡಿದ-
ರೆಲ್ಲಿ ಬೇಡಿದರೆಲ್ಲಿ ನೀಡಿದ-
ರೆಲ್ಲಿ ಓಡಿದರೆಲ್ಲಿ ಆಡಿದರಲ್ಲೆ ಇರುತಿಹನು ।
ಬಲ್ಲಿದರಿಗತಿಬಲ್ಲಿದನು ಸರಿ-
ಯಿಲ್ಲ ಇವಗಾವಲ್ಲಿ ನೋಡಲು
ಖುಲ್ಲಮಾನವನೊಲ್ಲನಪ್ರತಿಮಲ್ಲ ಜಗಕೆಲ್ಲ ॥21॥
ತಪ್ತಲೋಹವು ನೋಳ್ಪಜನರಿಗೆ
ಸಪ್ತಜಿಹ್ವನ ತೆರದಿ ತೋರ್ಪುದು
ಲುಪ್ತಪಾವಕ ಲೋಹ ಕಾಂಬುದು ಪೂರ್ವದೋಪಾದಿ ।
ಸಪ್ತವಾಹನ ನಿಖಿಳಜನರೊಳು
ವ್ಯಾಪ್ತನಾದುದರಿಂದ ಸರ್ವರು
ಆಪ್ತರಾಗಿಹರೆಲ್ಲಕಾಲದಿ ಹಿತವ ಕೈಕೊಂಡು ॥22॥
ವಾರಿದನು ಮಳೆಗರೆಯೆ ಬೆಳೆದಿಹ
ಭೂರುಹಂಗಳ ಚಿತ್ರ ಫಲ ರಸ
ಬೇರೆಬೇರಿಪ್ಪಂತೆ ಬಹುವಿಧ ಜೀವರೊಳಗಿದ್ದು ।
ಮಾರಮಣನವರವರ ಯೋಗ್ಯತೆ
ಮೀರದೆ ಗುಣಕರ್ಮಗಳನುಸಾರ
ನಡೆಸುವ ದೇವನಿಗೆ ವೈಷಮ್ಯವೆಲ್ಲಿಹುದೋ ॥23॥
ವಾರಿಜಾಪ್ತನ ಕಿರಣಮಣಿಗಳ
ಸೇರಿ ತತ್ತದ್ವರ್ಣಗಳನು ವಿ-
ಕಾರಗೈಸದೆ ನೋಳ್ಪರಿಗೆ ಕಂಗೊಳಿಸುವಂದದಲಿ ।
ಮಾರಮಣ ಲೋಕತ್ರಯದೊಳಿಹ
ಮೂರುವಿಧ ಜೀವರೊಳಗಿದ್ದು ವಿ-
ಹಾರ ಮಾಡುವನವರ ಯೋಗ್ಯತೆ ಕರ್ಮವನುಸರಿಸಿ ॥24॥
ಜಲವನಪಹರಿಸುವ ಘಳಿಗೆ ಬ-
ಟ್ಟಲನುಳಿದು ಜಯಘಂಟೆ ಕೈಪಿಡಿ-
ದೆಳೆದು ಹೊಡೆವಂದದಲಿ ಸಂತತ ಕರ್ತೃ ತಾನಾಗಿ ।
ಹಲಧರಾನುಜ ಪುಣ್ಯಪಾಪದ
ಫಲಗಳನು ದೇವಾಸುರರ ಗಣ-
ದೊಳು ವಿಭಾಗವ ಮಾಡಿಯುಣಿಸುತ ಸಾಕ್ಷಿಯಾಗಿಪ್ಪ ॥25॥
ಪೊಂದಿಕೊಂಡಿಹ ಸರ್ವರೊಳು ಸಂ-
ಬಂಧವಾಗದೆ ಸಕಲ ಕರ್ಮವ-
ರಂದದಲಿ ತಾ ಮಾಡಿ ಮಾಡಿಸಿ ತತ್ಫಲಗಳುಣದೆ ।
ಕುಂದದಣು ಮಹತ್ತೆನಿಪ ಘಟ-
ಮಂದಿರದಿ ಸರ್ವತ್ರ ತುಂಬಿಹ
ಬಾಂದಳದ ತೆರನಂತೆ ಇರುತಿಪ್ಪನು ರಮಾರಮಣ ॥26॥
ಕಾದ ಕಬ್ಬಿಣ ಹಿಡಿದು ಬಡಿಯಲು
ವೇದನೆಯು ಲೋಹಗಳಿಗಲ್ಲದೆ
ಆದುದೇನೈ ಅನಲಗಾವ್ಯಥೆಯೇನು ಮಾಡಿದರು ।
ಆದಿದೇವನು ಸರ್ವಜೀವರ
ಕಾದುಕೊಂಡಿಹನೊಳಹೊರಗೆ ದುಃ-
ಖಾದಿಗಳು ಸಂಬಂಧವಾಗುವವೇನೊ ಚಿನ್ಮಯಗೆ ॥27॥
ಮಳಲ ಮನೆಗಳ ಮಾಡಿ ಮಕ್ಕಳು
ಕೆಲವುಕಾಲದಲಾಡಿ ಮೋದದಿ
ತುಳಿದುಕೆಡಿಸುವ ತೆರದಿ ಲಕುಮೀರಮಣ ಲೋಕಗಳ ।
ಹಲವು ಬಗೆಯಲಿ ನಿರ್ಮಿಸುವ ನಿ-
ಶ್ಚಲನು ತಾನಾಗಿದ್ದು ಸಲಹುವ
ನೆಲರುಣಿಯವೋಲ್ ನುಂಗುವಗೆ ಎಲ್ಲಿಹುದೋ ಸುಖದುಃಖ ॥28॥
ವೇಷಭಾಷೆಗಳಿಂದ ಜನರ ಪ್ರ-
ಮೋದಗೈಸುವ ನಟಪುರುಷನೋಲ್
ದೋಷದೂರನು ಲೋಕದೊಳು ಬಹುರೂಪ ಮಾತಿನಲಿ ।
ತೋಷಿಸುವನವರವರ ಮನದಭಿ-
ಲಾಷೆಗಳ ಪೂರೈಸುತನುದಿನ
ಪೋಷಿಸುವ ಪೂತಾತ್ಮ ಪೂರ್ಣಾನಂದ ಜ್ಞಾನಮಯ ॥29॥
ಅಧಮ ಮಾನವನೋರ್ವ ಮಂತ್ರೌ-
ಷಧಗಳನು ತಾನರಿತು ಪಾವಕ
ಉದಕಗಳ ಸಂಬಂಧವಿಲ್ಲದೆ ಇಪ್ಪನದರೊಳಗೆ ।
ಪದುಮಜಾಂಡೋದರನು ಸರ್ವರ
ಹೃದಯದೊಳಗಿರೆ ಕಾಲಗುಣ ಕ-
ರ್ಮದ ಕಲುಷ ಸಂಬಂಧವಾಗುವುದೇ ನಿರಂಜನಗೆ ॥30॥
ಒಂದು ಗುಣದೊಳನಂತ ಗುಣಗಳು
ಒಂದು ರೂಪದೊಳಿಹವು ಲೋಕಗ-
ಳೊಂದೆ ರೂಪದಿ ಧರಿಸಿ ತದ್ಗತ ಪದಾರ್ಥದೊಳಹೊರಗೆ ।
ಬಾಂದಳದವೋಲಿದ್ದು ಬಹು ಪೆಸ-
ರಿಂದ ಕರೆಸುತ ಪೂರ್ಣಜ್ಞಾನಾ-
ನಂದಮಯ ಪರಿಪರಿ ವಿಹಾರವ ಮಾಡಿ ಮಾಡಿಸುವ ॥31॥
ಎಲ್ಲರೊಳು ತಾನಿಪ್ಪ ತನ್ನೊಳ-
ಗೆಲ್ಲರನು ಧರಿಸಿಹನು ಅಪ್ರತಿ-
ಮಲ್ಲ ಮನ್ಮಥಜನಕ ಜಗದಾದ್ಯಂತಮಧ್ಯಗಳಾ ।
ಬಲ್ಲ ಬಹುಗುಣಭರಿತ ದಾನವ-
ದಲ್ಲಣ ಜಗನ್ನಾಥವಿಠಲನು
ಸೊಲ್ಲ ಲಾಲಿಸಿ ಸ್ತಂಭದಿಂದಲಿ ಬಂದ ಭಕುತನಿಗೆ ॥32॥
॥ ವ್ಯಾಪ್ತಿ ಸಂಧಿ ಸಂಪೂರ್ಣ ॥