ಕರುಣಾ ಸಂಧಿ
ಜಗನ್ನಾಥದಾಸರುಹರಿಕಥಾಮೃತಸಾರ ಗುರುಗಳ
ಕರುಣದಿಂದಾಪನಿತು ಪೇಳುವೆ
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ॥
ಶ್ರವಣ ಮನಕಾನಂದವೀವುದು
ಭವಜನಿತ ದುಃಖಗಳ ಕಳೆವುದು
ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು ।
ಭುವನ ಪಾವನವೆನಿಪ ಲಕುಮೀ-
ಧವನ ಮಂಗಳ ಕಥೆಯ ಪರಮೋ-
ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ ॥1॥
ಮಳೆಯ ನೀರೋಣಿಯೊಳು ಪರಿಯಲು
ಬಳಸರೂರೊಳಗಿದ್ದ ಜನರಾ
ಜಲವು ಹೆದ್ದೊರೆಗೂಡೆ ಮಜ್ಜನಪಾನಗೈದಪರು ।
ಕಲುಷ ವಚನಗಳಾದಡೆಯು ಬಾಂ-
ಬೊಳೆಯ ಪೆತ್ತನ ಪಾದಮಹಿಮಾ
ಜಲಧಿ ಪೊಕ್ಕದರಿಂದ ಮಾಣ್ದಪರೇ ಮಹೀಸುರರು ॥2॥
ಶೃತಿತತಿಗಳಭಿಮಾನಿ ಲಕ್ಷ್ಮೀ
ಸ್ತುತಿಗಳಿಗೆ ಗೋಚರಿಸದಪ್ರತಿ-
ಹತ ಮಹೈಶ್ವರ್ಯಾದ್ಯಖಿಲ ಸದ್ಗುಣಗಣಾಂಭೋಧಿ ।
ಪ್ರತಿದಿವಸ ತನ್ನಂಘ್ರಿ ಸೇವಾ-
ರತ ಮಹಾತ್ಮರು ಮಾಡುತಿಹ ಸಂ-
ಸ್ತುತಿಗೆ ವಶನಾಗುವನಿವನ ಕಾರುಣ್ಯಕೇನೆಂಬೆ ॥3॥
ಮನವಚನಕತಿದೂರ ನೆನೆವರ-
ನನುಸರಿಸಿ ತಿರುಗುವನು ಜಾಹ್ನವಿ
ಜನಕ ಜನರೊಳಗಿದ್ದು ಜನಿಸುವ ಜಗದುದರ ತಾನು ।
ಘನಮಹಿಮ ಗಾಂಗೇಯನುತ ಗಾ-
ಯನವ ಕೇಳುತ ಗಗನಚರವಾ-
ಹನ ದಿವೌಕಸರೊಡನೆ ಚರಿಸುವ ಮನೆಮನೆಗಳಲ್ಲಿ ॥4॥
ಮಲಗಿ ಪರಮಾದರದಿ ಪಾಡಲು
ಕುಳಿತು ಕೇಳುವ ಕುಳಿತು ಪಾಡಲು
ನಿಲುವ ನಿಂತರೆ ನಲಿವ ನಲಿದರೆ ಒಲಿವೆ ನಿಮಗೆಂಬ ।
ಸುಲಭನೋ ಹರಿ ತನ್ನವರನರ
ಘಳಿಗೆ ಬಿಟ್ಟಗಲನು ರಮಾಧವ-
ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ ॥5॥
ಮನದೊಳಗೆ ತಾನಿಪ್ಪ ಮನವೆಂ-
ದೆನಿಸಿಕೊಂಬನು ಮನದ ವೃತ್ತಿಗ-
ಳನುಸರಿಸಿ ಭೋಗಗಳನೀವನು ತ್ರಿವಿಧಚೇತನಕೆ ।
ಮನವನಿತ್ತರೆ ತನ್ನನೀವನು
ತನುವ ದಂಡಿಸಿ ದಿನದಿನದಿ ಸಾ-
ಧನವ ಮಾಳ್ಪರಿಗಿತ್ತಪನು ಸ್ವರ್ಗಾದಿಭೋಗಗಳ ॥6॥
ಪರಮ ಸತ್ಪುರುಷಾರ್ಥರೂಪನು
ಹರಿಯು ಲೋಕಕೆ ಎಂದು ಪರಮಾ-
ದರದಿ ಸದುಪಾಸನೆಯಗೈವರಿಗಿತ್ತಪನು ತನ್ನ ।
ಮರೆದು ಧರ್ಮಾರ್ಥಗಳ ಕಾಮಿಸು- ವರಿಗೆ ನಗುತತಿಶೀಘ್ರದಿಂದಲಿ
ಸುರಪತನಯ ಸುಯೋಧನರಿಗಿತ್ತಂತೆ ಕೊಡುತಿಪ್ಪ ॥7॥
ಜಗವನೆಲ್ಲವ ನಿರ್ಮಿಸುವ ನಾ-
ಲ್ಮೊಗನೊಳಗೆ ತಾನಿದ್ದು ಸಲಹುವ
ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ ।
ಸ್ವಗತಭೇದ ವಿವರ್ಜಿತನು ಸ-
ರ್ವಗ ಸದಾನಂದೈಕ ದೇಹನು
ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ ॥8॥
ಒಬ್ಬನಲಿ ನಿಂದಾಡುವನು ಮ- ತೊಬ್ಬನಲಿ ನೋಡುವನು ಬೇಡುವ-
ನೊಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ ।
ಅಬ್ಬರದ ಹೆದ್ದೈವನಿವ ಮ- ತೊಬ್ಬರನು ಲೆಕ್ಕಿಸನು ಲೋಕದೊ-
ಳೊಬ್ಬನೇ ತಾ ಬಾಧ್ಯಬಾಧಕನಾಹ ನಿರ್ಭೀತ ॥9॥
ಶರಣಜನಮಂದಾರ ಶಾಶ್ವತ
ಕರುಣಿ ಕಮಲಾಕಾಂತ ಕಾಮದ
ಪರಮಪಾವನತರ ಸುಮಂಗಳಚರಿತ ಪಾರ್ಥಸಖ ।
ನಿರುಪಮಾನಂದಾತ್ಮನಿರ್ಗತ
ದುರಿತ ದೇವವರೇಣ್ಯನೆಂದಾ-
ದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ ॥10॥
ಜನನಿಯನು ಕಾಣದಿಹ ಬಾಲಕ
ನೆನೆನೆನೆದು ಹಲುಬುತಿರೆ ಕತ್ತಲೆ
ಮನೆಯೊಳಡಗಿದ್ದವನ ನೋಡುತ ನಗುತ ಹರುಷದಲಿ ।
ತನಯನಂ ಬಿಗಿದಪ್ಪಿ ರಂಬಿಸಿ
ಕನಲಿಕೆಯ ಕಳೆವಂತೆ ಮಧುಸೂ-
ದನನು ತನ್ನವರಿದ್ದೆಡೆಗೆ ಬಂದೊದಗಿ ಸಲಹುವನು ॥11॥
ಇಟ್ಟಿಕಲ್ಲನು ಭಕುತಿಯಿಂದಲಿ
ಕೊಟ್ಟ ಭಕುತಗೆ ಮೆಚ್ಚಿ ತನ್ನನೆ
ಕೊಟ್ಟ ಬಡಬ್ರಾಹ್ಮಣನ ಪಿಡಿಯವಲಕ್ಕಿಗಖಿಳಾರ್ಥ ।
ಕೆಟ್ಟ ಮಾತುಗಳೆಂದ ಚೈದ್ಯನ
ಪೊಟ್ಟೆಯೊಳಗಿಂಬಿಟ್ಟ ಬಾಣದ-
ಲಿಟ್ಟ ಭೀಷ್ಮನವಗುಣಗಳೆಣಿಸಿದನೇ ಕರುಣಾಳು ॥12॥
ಧನವ ಸಂರಕ್ಷಿಸುವ ಫಣಿ ತಾ-
ನುಣದೆ ಮತ್ತೊಬ್ಬರಿಗೆ ಕೊಡದನು-
ದಿನದಿ ನೋಡುತ ಸುಖಿಸುವಂದದಿ ಲಕುಮಿವಲ್ಲಭನು ।
ಪ್ರಣತರನು ಕಾಯ್ದಿಹನು ನಿಷ್ಕಾ-
ಮನದಿ ನಿತ್ಯಾನಂದಮಯ ದು-
ರ್ಜನರ ಸೇವೆಯನೊಲ್ಲನಪ್ರತಿಮಲ್ಲ ಜಗಕೆಲ್ಲ ॥13॥
ಬಾಲಕನ ಕಲಭಾಷೆ ಜನನಿಯು
ಕೇಳಿ ಸುಖಪಡುವಂತೆ ಲಕುಮೀ-
ಲೋಲ ಭಕುತರು ಮಾಡುತಿಹ ಸಂಸ್ತುತಿಗೆ ಹಿಗ್ಗುವನು ।
ತಾಳ ತನ್ನವರಲ್ಲಿ ಮಾಡುವ-
ಹೇಳನವ ಹೆದ್ದೈವ ವಿದುರನ
ಆಲಯದಿ ಪಾಲುಂಡು ಕುರುಪನ ಮಾನವನೆ ಕೊಂಡ ॥14॥
ಸ್ಮರಿಸುವವರಪರಾಧಗಳ ತಾ
ಸ್ಮರಿಸ ಸಕಲೇಷ್ಟಪ್ರದಾಯಕ
ಮರಳಿ ತನಗರ್ಪಿಸಲು ಕೊಟ್ಟುದನಂತಮಡಿ ಮಾಡಿ ।
ಪರಿಪರಿಯಲಿಂದುಣಿಸಿ ಸುಖ ಸಾ-
ಗರದಿ ಲೋಲಾಡಿಸುವ ಮಂಗಳ-
ಚರಿತ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ ॥15॥
ಏನು ಕರುಣಾನಿಧಿಯೋ ಹರಿ ಮ- ತೇನು ಭಕ್ತಾಧೀನನೋ ಇ-
ನ್ನೇನು ಈತನ ಲೀಲೆ ಇಚ್ಛಾಮಾತ್ರದಲಿ ಜಗವ ।
ತಾನೆ ಸೃಜಿಸುವ ಪಾಲಿಸುವ ನಿ-
ರ್ವಾಣ ಮೊದಲಾದಖಿಳಲೋಕ-
ಸ್ಥಾನದಲಿ ಮತ್ತವರನಿಟ್ಟಾನಂದಪಡಿಸುವನು ॥16॥
ಜನಪ ಮೆಚ್ಚಿದರೀವ ಧನವಾ-
ಹನ ವಿಭೂಷಣವಸನ ಭೂಮಿಯ
ತನುಮನವನಿತ್ತಾದರಿಪರುಂಟೇನೋ ಲೋಕದೊಳು ।
ಅನವರತ ನೆನೆವವರನಂತಾ-
ಸನವೆ ಮೊದಲಾದಾಲಯದೊಳಿ-
ಟ್ಟಣುಗನಂದದಲವರ ವಶನಾಗುವ ಮಹಾಮಹಿಮ ॥17॥
ಭುವನ ಪಾವನ ಚರಿತ ಪುಣ್ಯ-
ಶ್ರವಣ ಕೀರ್ತನ ಪಾಪನಾಶನ
ಕವಿಭಿರೀಡಿತ ಕೈರವದಳಶ್ಯಾಮ ನಿಸ್ಸೀಮ ।
ಯುವತಿ ವೇಷದಿ ಹಿಂದೆ ಗೌರೀ-
ಧವನ ಮೋಹಿಸಿ ಕೆಡಿಸಿ ಉಳಿಸಿದ
ಇವನ ಮಾಯವ ಗೆಲುವನಾವನು ಈ ಜಗತ್ರಯದಿ ॥18॥
ಪಾಪಕರ್ಮವ ಸಹಿಸುವೆಡೆ ಲ-
ಕ್ಷ್ಮೀಪತಿಗೆ ಸಮರಾದ ದಿವಿಜರ-
ನೀ ಪಯೋಜಭವಾಂಡದೊಳಗಾವಲ್ಲಿ ನಾ ಕಾಣೆ ।
ಗೋಪ ಗುರುವಿನ ಮಡದಿ ಭೃಗು ನಗ-
ಚಾಪ ಮೊದಲಾದವರು ಮಾಡ್ದ ಮ-
ಹಾಪರಾಧಗಳೆಣಿಸಿದನೆ ಕರುಣಾಸಮುದ್ರ ಹರಿ ॥19॥
ಅಂಗುಟಾಗ್ರದಿ ಜನಿಸಿದ ಮರತ-
ರಂಗಿಣಿಯು ಲೋಕತ್ರಯಗಳಘ
ಹಿಂಗಿಸುವಳವ್ಯಾಕೃತಾಕಾಶಾಂತ ವ್ಯಾಪಿಸಿದ ।
ಇಂಗಡಲ ಮಗಳೊಡೆಯನಂಗೋ-
ಪಾಂಗಗಳಲಿಪ್ಪಮಲನಂತ ಸು-
ಮಂಗಳಪ್ರದನಾಮ ಪಾವನ ಮಾಳ್ಪದೇನರಿದು ॥20॥
ಕಾಮಧೇನು ಸುಕಲ್ಪತರು ಚಿಂ-
ತಾಮಣಿಗಳಮರೇಂದ್ರ ಲೋಕದಿ
ಕಾಮಿತಾರ್ಥಗಳೀವವಲ್ಲದೆ ಸೇವೆ ಮಾಳ್ಪರಿಗೆ ।
ಶ್ರೀ ಮುಕುಂದನ ಪರಮ ಮಂಗಳ
ನಾಮ ನರಕಸ್ಥರನು ಸಲಹಿತು
ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು ॥21॥
ಮನದೊಳಗೆ ಸುಂದರ ಪದಾರ್ಥವ
ನೆನೆದುಕೊಡೆ ಕೈಕೊಂಡು ಬಲು ನೂ-
ತನ ಸುಶೋಭಿತ ಗಂಧಸುರಸೋಪೇತ ಫಲರಾಶಿ ।
ದ್ಯುನದಿನಿವಹಗಳಂತೆ ಕೊಟ್ಟವ-
ರನು ಸದಾ ಸಂತಯಿಸುವನು ಸ-
ದ್ಗುಣವ ಕದ್ದವರಘವ ಕದಿವನು ಅನಘನೆಂದೆನಿಸಿ ॥22॥
ಚೇತನಾಚೇತನ ವಿಲಕ್ಷಣ
ನೂತನ ಪದಾರ್ಥಗಳೊಳಗೆ ಬಲು-
ನೂತನತಿ ಸುಂದರಕೆ ಸುಂದರ ರಸಕೆ ರಸರೂಪ ।
ಜಾತರೂಪೋದರ ಭವಾದ್ಯರೊ-
ಳಾತತ ಪ್ರತಿಮ ಪ್ರಭಾವ ಧ-
ರಾತಳದೊಳೆಮ್ಮೊಡನೆಯಾಡುತಲಿಪ್ಪ ನಮ್ಮಪ್ಪ ॥23॥
ತಂದೆ ತಾಯ್ಗಳು ತಮ್ಮ ಶಿಶುವಿಗೆ
ಬಂದ ಭಯಗಳ ಪರಿಹರಿಸಿ ನಿಜ-
ಮಂದಿರದಿ ಬೇಡಿದುದನಿತ್ತಾದರಿಸುವಂದದಲಿ ।
ಹಿಂದೆ ಮುಂದೆಡಬಲದಿ ಒಳಹೊರ-
ಗಿಂದಿರೇಶನು ತನ್ನವರ ನೆಂ-
ದೆಂದು ಸಲಹುವನಾಗಸದವೋಲೆತ್ತ ನೋಡಿದರು ॥24॥
ಒಡಲ ನೆಳಲಂದದಲಿ ಹರಿ ನ- ಮ್ಯೊಡನೆ ತಿರುಗುವ ಒಂದರೆಕ್ಷಣ
ಬಿಡದೆ ಬೆಂಬಲನಾಗಿ ಭಕ್ತಾಧೀನನೆಂದೆನಿಸಿ ।
ತಡೆವ ದುರಿತೌಘಗಳ ಕಾಮದ
ಕೊಡುವ ಸಕಲೇಷ್ಟಗಳ ಸಂತತ
ನಡೆವ ನಮ್ಮಂದದಲಿ ನವಸುವಿಶೇಷ ಸನ್ಮಹಿಮ ॥25॥
ಬಿಟ್ಟವರ ಭವಪಾಶದಿಂದಲಿ
ಕಟ್ಟುವನು ಬಹುಕಠಿಣನಿವ ಶಿ-
ಷ್ಟೇಷ್ಟನೆಂದರಿದನವರತ ಸದ್ಭಕ್ತಿಪಾಶದಲಿ ।
ಕಟ್ಟುವರ ಭವಕಟ್ಟು ಬಿಡಿಸುವ
ಸಿಟ್ಟಿನವನಿವನಲ್ಲ ಕಾಮದ
ಕೊಟ್ಟು ಕಾವನು ಸಕಲಸೌಖ್ಯಗಳiಹಪರಂಗಳಲಿ ॥26॥
ಕಣ್ಣಿಗೆವೆಯಂದದಲಿ ಕೈ ಮೈ
ತಿಣ್ಣಿಗೊದಗುವ ತೆರದಿ ಪಲ್ಗಳು
ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ ।
ಪುಣ್ಯಫಲಗಳನೀವುದಕೆ ನುಡಿ-
ವೆಣ್ಣಿನಾಣ್ಮಾಂಡದೊಳು ಲಕ್ಷ್ಮಣ-
ಣ್ಣನೊದಗುವ ಭಕ್ತರವಸರಕಮರಗಣಸಹಿತ ॥27॥
ಕೊಟ್ಟದನು ಕೈಗೊಂಬರೆಕ್ಷಣ
ಬಿಟ್ಟಗಲ ತನ್ನವರ ದುರಿತಗ-
ಳಟ್ಟುವನು ದೂರದಲಿ ದುರಿತಾರಣ್ಯ ಪಾವಕನು ।
ಬೆಟ್ಟ ಬೆನ್ನಿಲಿ ಹೊರಿಸಿದವರೊಳು
ಸಿಟ್ಟು ಮಾಡಿದನೇನೋ ಹರಿ ಕಂ-
ಗೆಟ್ಟ ಸುರರಿಗೆ ಸುಧೆಯನುಣಿಸಿದ ಮುರಿದನಹಿತರನು ॥28॥
ಖೇದ ಮೋದ ಜಯಾಪಜಯ ಮೊದ-
ಲಾದ ದೋಷಗಳಿಲ್ಲ ಚಿನ್ಮಯ
ಸಾದರದಿ ತನ್ನಂಘ್ರಿ ಕಮಲವ ನಂಬಿ ಸ್ತುತಿಸುವರ ।
ಕಾದುಕೊಂಡಿಹ ಪರಮ ಕರುಣಾ ಮ-
ಹೋದಧಿಯು ತನ್ನವರು ಮಾಡ್ದಪ-
ರಾಧಗಳ ನೋಡದಲೆ ಸಲಹುವ ಸರ್ವಕಾಮದನು ॥29॥
ಮೀನ ಕೂರ್ಮ ವರಾಹ ನರ ಪಂ-
ಚಾನನಾತುಳ ಶೌರ್ಯ ವಾಮನ
ರೇಣುಕಾತ್ಮಜ ರಾವಣಾರಿ ನಿಶಾಚರಧ್ವಂಸಿ ।
ಧೇನುಕಾಸುರ ಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನು ॥30॥
ಶ್ರೀ ಮನೋರಮ ಶಮಲವರ್ಜಿತ
ಕಾಮಿತಪ್ರದ ಕೈರವದಳ
ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷಸಖ ।
ಸಾಮಸನ್ನುತ ಸಕಲ ಗುಣಗಣ-
ಧಾಮ ಶ್ರೀಜಗನ್ನಾಥವಿಠ್ಠಲ
ನೀ ಮಹಿಯೊಳವತರಿಸಿ ಸಲಹಿದೆ ಸಕಲ ಸುಜನರನು ॥31॥