ಮಂಗಳಾಚರಣ ಸಂಧಿ
ಜಗನ್ನಾಥದಾಸರುಹರಿಕಥಾಮೃತಸಾರ ಗುರುಗಳ
ಕರುಣದಿಂದಾಪನಿತು ಪೇಳುವೆ ।
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ॥
ಶ್ರೀರಮಣಿಕರ ಕಮಲ ಪೂಜಿತ
ಚಾರುಚರಣ ಸರೋಜ ಬ್ರಹ್ಮ ಸ-
ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ ।
ನೀರಜಭವಾಂಡೋದಯ ಸ್ಥಿತಿ
ಕಾರಣನೆ ಕೈವಲ್ಯದಾಯಕ
ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವ ॥1॥
ಜಗದುದರನತಿವಿಮಲಗುಣರೂ-
ಪಗಳನಾಲೋಚನದಿ ಭಾರತ
ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ ।
ಬಗೆಬಗೆಯ ನೂತನವ ಕಾಣುತ
ಮಿಗೆ ಹರುಷದಿಂ ಪೊಗಳಿ ಹಿಗ್ಗುವ
ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು ॥2॥
ನಿರುಪಮಾನಂದಾತ್ಮಭವ ನಿ-
ರ್ಜರಸಭಾಸಂಸೇವ್ಯ ಋಜುಗಣ-
darase ಸತ್ತ್ವ ಪ್ರಚುರ ವಾಣೀಮುಖಸರೋಜೇನ ।
ಗರುಡ ಶೇಷ ಶಶಾಂಕದಳಶೇ-
ಖರರ ಜನಕ ಜಗದ್ಗುರುವೆ ತ್ವ-
ಚ್ಚರಣಗಳಿಗಭಿವಂದಿಸುವೆ ಪಾಲಿಪುದು ಸನ್ಮತಿಯ ॥3॥
ಆರು ಮೂರೆರಡೊಂದು ಸಾವಿರ
ಮೂರೆರಡು ಶತಶ್ವಾಸ ಜಪಗಳ
ಮೂರುವಿಧ ಜೀವರೊಳಗಬ್ಜಜಕಲ್ಪಪರಿಯಂತ ।
ತಾ ರಚಿಸಿ ಸಾತ್ವರಿಗೆ ಸುಖ ಸಂ-
ಸಾರ ಮಿಶ್ರರಿಗಧಮಜನರಿಗ-
ಪಾರ ದುಃಖಗಳೀವ ಗುರುಪವಮಾನ ಸಲಹೆಮ್ಮ ॥4॥
ಚತುರವದನನ ರಾಣಿಯತಿರೋ-
ಹಿತ ವಿಮಲವಿಜ್ಞಾನಿ ನಿಗಮ
ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣೀ ।
ನತಿಸಿ ಬೇಡುವೆ ಜನನಿ ಲಕುಮೀ-
ಪತಿಯ ಗುಣಗಳ ತುತಿಪುದಕೆ ಸ-
ನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ ॥5॥
ಕೃತಿರಮಣ ಪ್ರದ್ಯುಮ್ನನಂದನೆ
ಚತುರವಿಶಂತಿ ತತ್ತ್ವಪತಿ ದೇ-
ವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿ ।
ಸತತ ಹರಿಯಲಿ ಗುರುಗಳಲಿ ಸ-
ದ್ರತಿಯ ಪಾಲಿಸಿ ಭಾಗವತ ಭಾ-
ರತ ಪುರಾಣ ರಹಸ್ಯ ತತ್ವಗಳರುಪು ಕರುಣದಲಿ ॥6॥
ವೇದಪೀಠ ವಿರಿಂಚಿ ಭವ ಶ-
ಕ್ರಾದಿ ಸುರ ವಿಜ್ಞಾನದಾಯಕ
ಮೋದಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ ।
ಛೇದಭೇದವಿಷಾದ ಕುಟಿಲಾಂ-
ತಾದಿ ಮಧ್ಯವಿದೂರ ಆದಾ-
ನಾದಿಕಾರಣ ಬಾದರಾಯಣ ಪಾಹಿಸತ್ರಾಣ ॥7॥
ಕ್ಷಿತಿಯೊಳಗೆ ಮಣಿಮಂತ ಮೊದಲಾ-
ದತಿ ದುರಾತ್ಮರು ಒಂದಧಿಕ ವಿಂ-
ಶತಿ ಕುಭಾಷ್ಯವ ರಚಿಸೆ ನಡುಮನೆಯೆಂಬ ಬ್ರಾಹ್ಮಣನ ।
ಸತಿಯ ಜಠರದೊಳವತರಿಸಿ ಭಾ-
ರತಿರಮಣ ಮಧ್ವಾಭಿಧಾನದಿ
ಚತುರದಶಲೋಕದಲಿ ಮೆರೆದಪ್ರತಿಮಗೊಂದಿಸುವೆ ॥8॥
ಪಂಚಭೇದಾತ್ಮಕ ಪ್ರಪಂಚಕೆ
ಪಂಚರೂಪಾತ್ಮಕನೆ ದೈವಕ
ಪಂಚಮುಖಶಕ್ರಾದಿಗಳು ಕಿಂಕರರು ಶ್ರೀಹರಿಗೆ ।
ಪಂಚವಿಂಶತಿ ತತ್ತ್ವತರತಮ
ಪಂಚಿಕೆಗಳನು ಪೇಳ್ದಭಾವಿ ವಿ-
ರಿಂಚಿಯೆನಿಪಾನಂದ ತೀರ್ಥರ ನೆನೆವೆನನುದಿನವು ॥9॥
ವಾಮದೇವ ವಿರಿಂಚಿತನಯ ಉ-
ಮಾಮನೋಹರ ಉಗ್ರ ಧೂರ್ಜಟಿ
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ ।
ಕಾಮಹರ ಕೈಲಾಸಮಂದಿರ
ಸೋಮಸೂರ್ಯಾನಲವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ ॥10॥
ಕೃತ್ತಿವಾಸನೆ ಹಿಂದೆ ನೀ ನಾ-
l್ವತ್ತು ಕಲ್ಪಸಮೀರನಲಿ ಶಿ-
ಷ್ಯತ್ವ ವಹಿಸ್ಯಖಿಳಾಗಮಾರ್ಥಗಳೋದಿ ಜಲಧಿಯೊಳು ।
ಹತ್ತು ಕಲ್ಪದಿ ತಪವಗೈದಾ-
dಿತ್ಯರೊಳಗುತ್ತಮನೆನಿಸಿ ಪುರು-
ಷೋತ್ತಮನ ಪರಿಯಂಕಪದವೈದಿದೆಯೊ ಮಹದೇವ ॥11॥
ಪಾಕಶಾಸನ ಮುಖ್ಯ ಸಕಲ ದಿ-
ವೌಕಸರಿಗಭಿನಮಿಪೆ ಋಷಿಗಳಿ-
gೇಕಚಿತ್ತದಿ ಪಿತೃಗಳಿಗೆ ಗಂಧರ್ವ ಕ್ಷಿತಿಪರಿಗೆ ।
ಆ ಕಮಲನಾಭಾದಿ ಯತಿಗಳ-
ನೀಕಕಾನಮಿಸುವೆನು ಬಿಡದೆ ರ-
ಮಾಕಳತ್ರನ ದಾಸವರ್ಗಕೆ ನಮಿಪೆನನರವರತ ॥12॥
ಪರಿಮಳವು ಸುಮನದೊಳಗನಲನು
ಅರಣಿಯೊಳಗಿಪ್ಪಂತೆ ದಾಮೋ-
ದರನು ಬ್ರಹ್ಮಾದಿಗಳ ಮನದಲಿ ತೋರಿತೋರದಲೆ ।
ಇರುತಿಹ ಜಗನ್ನಾಥವಿಠಲನ
ಕರುಣ ಪಡೆವ ಮುಮುಕ್ಷುಜೀವರು
ಪರಮಭಾಗವತರನು ಕೊಂಡಾಡುವುದು ಪ್ರತಿದಿನವು ॥13॥
॥ ಮಂಗಳಾಚರಣ ಸಂಧಿ ಸಂಪೂರ್ಣ ॥