ಭೋಜನರಸ ವಿಭಾಗ ಸಂಧಿ
ಜಗನ್ನಾಥದಾಸರುಹರಿಕಥಾಮೃತಸಾರ ಗುರುಗಳ
ಕರುಣದಿಂದಾಪನಿತು ಪೇಳುವೆ ।
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ॥
ವನಜಜಾಂಡದೊಳಳ್ಳಖಿಳ ಚೇ-
ತನರು ಭುಂಜಿಪ ಚತುರವಿಧ ಭೋ-
ಜನ ಪದಾರ್ಥದಿ ಚತುರವಿಧ ರಸರೂಪ ತಾನಾಗಿ ।
ಮನಕೆ ಬಂದದನುಂಡುಣಿಸಿ ಸಂ-
ಹನನಕುಪಚಯ ಕರಣಕಾನಂ-
ದ ನಿಮಿಷರಿಗಾತ್ಮಪ್ರದರ್ಶನ ಸುಖವನೀವಹದಿ ॥1॥
ನೀಡದಂದದಲಿಪ್ಪ ಲಿಂಗಕ್ಕೆ
ಷೋಡಶಾತ್ಮಕ ರಸವಿಭಾಗವ
ಮಾಡಿ ಷೋಡಶಕಲೆಗಳಿಗೆ ಉಪಚಯಗಳನೆ ಕೊಡುತ ।
ಕ್ರೋಡ ಎಪ್ಪತ್ತೆರಡು ಸಾವಿರ
ನಾಡಿಗತ ದೇವತೆಗಳೊಳಗಿ-
ದ್ದಾಡುತಾನಂದಾತ್ಮ ಚರಿಸುವ ಲೋಕದೊಳು ತಾನು ॥2॥
ವಾರಿವಾಚ್ಯನು ವಾರಿಯೊಳಗಿ-
ದ್ದಾರು ರಸವೆಂದೆನಿಸಿ ಮೂವ-
ತ್ತಾರುಸಾವಿರ ಸ್ತ್ರೀಪುರುಷನಾಡಿಯೊಳು ತದ್ರೂಪ ।
ಧಾರಕನು ತಾನಾಗಿ ಸರ್ವಶ-
ರೀರದೊಳಹಶ್ಚ ರಾತ್ರಿಯಲಿ ವಿ-
ವಿಹಾರ ಮಾಳ್ಪನು ಬೃಹತಿಯೆಂಬ ಸುನಾಮದಿಂ ಕರೆಸಿ ॥3॥
ಆರು ರಸ ಸತ್ವಾದಿ ಭೇದದಿ
ಆರು ಮೂರಾಗಿಹವು ಸಾರಾ-
ಸಾರ ನೀತಾನೀತ ಖಂಡಾಖಂಡ ಚಿತ್ಪ್ರಚುರ ।
ಈರಧಿಕ ಎಪ್ಪತ್ತು ಸಾವಿರ
ಮಾರಮಣನ ರಸಾಖ್ಯರೂಪ ಶ-
ರೀರದಲಿ ಭೋಜ್ಯ ಸುಪದಾರ್ಥದಿ ತಿಳಿದು ಭುಂಜಿಪುದು ॥4॥
ಕ್ಷೀರಗತ ರಸರೂಪಗಳು ಮು-
ನ್ನೂರು ಮೇಲೈವತ್ತುನಾಲಕು
ಚಾರುಘೃತರಸರೂಪಗಳು ಇಪ್ಪತ್ತರೊಂಭತ್ತು ।
ಸಾರಗುಡದೊಳಗೈದು ಸಾವಿರ
ನೂರುವೊಂದು ಸುರೂಪ ದ್ವಿಸಹ-
ಸ್ರಾರೆರಡು ಶತಪಂಚವಿಂಶತಿ ರೂಪ ಫಲಗಳಲಿ ॥5॥
ವಿಶದ ಸ್ಥಿರ ತೀಕ್ಷಣವು ನಿರಹರ
ರಸಗಳೊಳು ಮೂರೈದು ಸಾವಿರ
ತ್ರಿಶತನವರೂಪಗಳ ಚಿಂತಿಸಿ ಭುಂಜಿಪುದು ವಿಷಯ ।
ಶ್ವಸನ ತತ್ತ್ವೇಶರೊಳಗಿದ್ದೀ
ಪೆಸರಿನಿಂದಲಿ ಕರೆಸುವನು ಧೇ-
ನಿಸಿದರೀಪರಿ ಮನಕೆ ಪೊಳೆವನು ಬಲ್ಲ ವಿಬುಧರಿಗೆ ॥6॥
ಕಪಿಲನರಹರಿ ಭಾರ್ಗವತ್ರಯ
ವಪುಷ ನೇತ್ರದಿ ನಾಸಿಕಾಸ್ಯದಿ
ಶಫರನಾಮಕ ಜಿಹ್ವೆಯಲಿ ದಂತದಲಿ ಹಂಸಾಖ್ಯ ।
ತ್ರಿಪದಿಪಾದ್ಯ ಹಯಾಸ್ಯ ವಾಚ್ಯದೊ-
ಳಪರಿಮಿತ ಸುಖಪೂರ್ಣ ಸಂತತ
ಕೃಪಣರೊಳಗಿದ್ದವರವರ ರಸ ಸ್ವೀಕರಿಸಿ ಕೊಡುವ ॥7॥
ನಿರುಪಮಾನಂದಾತ್ಮ ಹರಿ ಸಂ-
ಕರುಷಣ ಪ್ರದ್ಯುಮ್ನರೂಪದಿ
ಇರುತಿಹನು ಭೋಕ್ತ್ಯಗಳೊಳಗೆ ತಚ್ಛಕ್ತಿದನು ಎನಿಸಿ ।
ಕರೆಸುವನು ನಾರಾಯಣನಿರು-
ದ್ಧೆರಡು ನಾಮದಿ ಭೋಜ್ಯವಸ್ತುಗ
ನಿರುತ ತರ್ಪಕನಾಗಿ ತೃಪ್ತಿಯನೀವ ಚೇತನಕೆ ॥8॥
ವಾಸುದೇವನು ಒಳಹೊರಗೆ ಅವ-
ಕಾಶಕೊಡುವ ನಭಸ್ಥನಾಗಿ ರ-
ಮಾಸಮೇತ ವಿಹಾರಮಾಳ್ಪನು ಪಂಚರೂಪದಲಿ ।
ಆ ಸರೋರುಹ ಸಂಭವಾಭವ
ವಾಸವಾದ್ಯಮರಾದಿ ಚೇತನ-
ರಾಶಿಯೊಳಗಿಹನೆಂದು ಅರಿತವನವನೆ ಕೋವಿದನು ॥9॥
ವಾಸುದೇವನು ಅನ್ನದೊಳು ನಾ-
ನಾ ಸುಭಕ್ಷ್ಯದಿ ಸಂಕರ್ಷಣ ಕೃ-
ತೀಶ ಪರಮಾನ್ನದೊಳು ಘೃತದೊಳಗಿಪ್ಪನನಿರುದ್ಧ ।
ಆ ಸುಪರ್ಣಾಂಸಗನು ಸೂಪದಿ
ವಾಸವಾನುಜ ಶಾಕದೊಳು ಮೂ-
ಲೇಶ ನಾರಾಯಣನು ಸರ್ವತ್ರದಲಿ ನೆಲೆಸಿಹನು ॥10॥
ಅಗಣಿತಾತ್ಮ ಸುಭೋಜನ ಪದಾ-
ರ್ಥಗಳ ಒಳಗೆ ಅಖಂಡವಾದೊಂ-
ದಗಳಿನೊಳನಂತಾಂಶದಿಂದಲಿ ಖಂಡನೆಂದೆನಿಸಿ ।
ಜಗದಿ ಜೀವರ ತೃಪ್ತಿಪಡಿಸುವ
ಸ್ವಗತಭೇದ ವಿವರ್ಜಿತನ ಇ-
ರ್ಬಗೆಯ ರೂಪವನರಿತು ಭುಂಜಿಸಿ ಅರ್ಪಿಸವನಡಿಗೆ ॥11॥
ಈ ಪರಿಯಲರಿತುಂಬ ನರ ನಿ-
ತ್ಯೋಪವಾಸಿ ನಿರಾಮಯನು ನಿ-
ಷ್ಪಾಪಿ ನಿತ್ಯಮಹತ್ ಸುಯಜ್ಞಗಳಾಚರಿಸಿದವನು ।
ಪೋಪುದಿಪ್ಪುದು ಬಪ್ಪುದೆಲ್ಲ ರ-
ಮಾಪತಿಗಧಿಷ್ಠಾನವೆನಲು ಕೃ-
ಪಾಪಯೋನಿಧಿ ಮಾತನಾಲಿಸುವನು ಜನನಿಯಂತೆ ॥12॥
ಆರೆರಡು ಸಾವಿರದ ಮೇಲಿ-
ನ್ನೂರ ಐವತ್ತೊಂದು ರೂಪದಿ
ಸಾರಭೋಕ್ತನಿರುದ್ಧದೇವನು ಅನ್ನಮಯನೆನಿಪ ।
ಮೂರೆರಡುವರೆ ಸಾವಿರದ ಮೇಲ್
ಮೂರಧಿಕ ನಾಲ್ವತ್ತು ರೂಪದಿ
ತೋರುತಿಹ ಪ್ರದ್ಯುಮ್ನ ಜಗದೊಳು ಪ್ರಾಣಮಯನಾಗಿ ॥13॥
ಎರಡು ಕೋಶಗಳೊಳಹೊರಗೆ ಸಂ-
ಕರುಷಣೈದು ಸುಲಕ್ಷದರುವ-
ತ್ತೆರಡು ಸಾವಿರದೇಳಧಿಕ ಶತರೂಪಗಳ ಧರಿಸಿ ।
ಕರೆಸಿಕೊಂಬ ಮನೋಮಯನು ಎಂ-
ದರವಿದೂರನು ಈರೆರಡು ಸಾ-
ವಿರದ ಮುನ್ನೂರಾದ ಮೇಲ್ನಾಲ್ಕಧಿಕ ಎಪ್ಪತ್ತು ॥14॥
ರೂಪದಿಂ ವಿಜ್ಞಾನಮಯನೆಂ-
ಬೀ ಪೆಸರಿನಿಂ ವಾಸುದೇವನು
ವ್ಯಾಪಿಸಿಹ ಮಹದಾದಿತತ್ವವ ತತ್ಪತಿಗಳೊಳಗೆ ।
ಈ ಪುರುಷನಾಮಕನ ಶುಭಸ್ವೇ-
ದಾಪಳೆನಿಸಿ ರಮಾಂಬ ತಾ ಬ್ರ-
ಹ್ಮಾಪರೋಕ್ಷಿಗಳಾದವರ ಲಿಂಗಾಂಗ ಕೆಡಿಸುವಳು ॥15॥
ಐದುಸಾವಿರ ನೂರ ಇಪ್ಪ-
ತ್ತೈದು ನಾರಾಯಣನ ರೂಪವ ತಾ-
ಧರಿಸಿಕೊಂಡನುದಿನದಿ ಆನಂದಮಯನೆನಿಪ ।
ಐದು ಲಕ್ಷದ ಮೇಲೆ ಎಂಭ-
ತ್ತೈದು ಸಾವಿರ ನಾಲ್ಕು ಶತಗಳ-
ಐದು ಕೋಶಾತ್ಮಕ ವಿರಿಂಚಾಂಡದೊಳು ತುಂಬಿಹನು ॥16॥
ನೂರುವೊಂದು ಸುರೂಪದಿಂ ಶಾಂ-
ತೀರಮಣ ತಾನನ್ನನೆನಿಪೈ-
ನೂರ ಮೇಲ್ಮೂರಧಿಕದಶ ಪ್ರಾಣಾಖ್ಯ ಪ್ರದ್ಯುಮ್ನ ।
ತೋರುತಿಹನೈವತ್ತು ಐದು ವಿ-
ಕಾರಮನದೊಳು ಸಂಕುರಷಣೈ-
ನೂರು ಚತುರಾಶೀತಿ ವಿಜ್ಞಾನಾತ್ಮ ವಿಶ್ವಾಖ್ಯ ॥17॥
ಮೂರು ಸಾವಿರದರ್ಧಶತ ಮೇ-
ಲೀರಧಿಕರೂಪಗಳ ಧರಿಸಿ ಶ-
ರೀರದೊಳಗಾನಂದಮಯ ನಾರಾಯಣಾಹ್ವಯನು ।
ಈರೆರಡುಸಾವಿರದ ಮೇಲ್ಮು-
ನ್ನೂರು ಐದು ಸುರೂಪದಿಂದಲಿ
ಭಾರತೀಶನೊಳಿಪ್ಪ ನವನೀತಸ್ಥ ಘೃತದಂತೆ ॥18॥
ಮೂರಧಿಕವೈವತ್ತು ಪ್ರಾಣ ಶ-
ರೀರದೊಳಗನಿರುದ್ಧನಿಪ್ಪೈ-
ನೂರು ಹನ್ನೊಂದಧಿಕಪಾನದೊಳಿಪ್ಪ ಪ್ರದ್ಯುಮ್ನ ।
ಮೂರನೇ ವ್ಯಾನನೊಳಗೈದರೆ-
ನೂರು ರೂಪದಿ ಸಂಕರುಷಣೈ-
ನೂರ ಮೂವತ್ತೈದುದಾನದೊಳಿಪ್ಪ ಮಾಯೇಶ ॥19॥
ಮೂಲನಾರಾಯಣನು ಐವ-
ತ್ತೇಳಧಿಕ ಐನೂರು ರೂಪವ
ತಾಳಿ ಸರ್ವತ್ರದಿ ಸಮಾನನೊಳಿಪ್ಪ ಸರ್ವೇಶ ।
ಲೀಲೆಗೈವನು ಸಾವಿರದ ಮೇ-
ಲೇಳು ನೂರ್ಹನ್ನೊಂದು ರೂಪವ
ತಾಳಿ ಪಂಚಪ್ರಾಣರೊಳು ಲೋಕಗಳ ಸಲಹುವನು ॥20॥
ತ್ರಿನವತಿ ಸ್ವರೂಪಾತ್ಮಕನಿರು-
ದ್ಧನು ಸದಾ ಯಜಮಾನನಾಗಿ-
ದ್ದನಲ ಯಮ ಸೋಮಾದಿ ಪಿತೃದೇವತೆಗಳಿಗೆ ಅನ್ನ ।
ನೆನಿಪನಾ ಪ್ರದ್ಯುಮ್ನಸಂಕರು-
ಷಣ ವಿಭಾಗವ ಮಾಡಿ ಕೊಟ್ಟುಂ-
ಡುಣಿಪ ನಿತ್ಯಾನಂದ ಭೋಜನದಾಯಿ ತುರ್ಯಾಹ್ವ ॥21॥
ಷಣ್ಣವತಿನಾಮಕನು ವಸು ಮು-
ಕ್ಕಣ್ಣ ಭಾಸ್ಕರರೊಳಗೆ ನಿಂತು ಪ್ರ-
ಪನ್ನರನುದಿನ ನಿಷ್ಕಪಟ ಸದ್ಭಕ್ತಿಯಲಿ ಮಾಳ್ಪ ।
ಪುಣ್ಯಕರ್ಮವ ಸ್ವೀಕರಿಸಿ ಕಾ-
ರುಣ್ಯ ಸಾಗರನಾ ಪಿತೃಗಳಿಗ-
ಗಣ್ಯ ಸುಖವಿತ್ತವರ ಪೊರೆವನು ಎಲ್ಲಕಾಲದಲಿ ॥22॥
ಸುತಪನೇಕೋತ್ತರ ಸುಪಂಚಾ-
ಶತವರಣ ಕರಣದಿ ಚತುರ್ವಿಂ-
ಶತಿ ಸುತತ್ವದಿ ಧಾತುಗಳೊಳಿದ್ದವಿರತನಿರುದ್ಧ ।
ಜತನ ಮಾಳ್ಪನು ಜಗದಿ ಜೀವ-
ಪ್ರತತಿಗಳ ಷಣ್ಣವತಿ ನಾಮಕ
ಚತುರ ಮೂರ್ತಿಗಳರ್ಚಿಸುವರದರಿಂದ ಬಲ್ಲವರು ॥23॥
ಅಬುಜಜಾಂಡೋದರನು ವಿಪಿನದಿ
ಶಬರಿಯೆಂಜಲನುಂಡು ಗೋಕುಲ-
ದಬಲೆಯರನೊಲಿಸಿದನು ಋಷಿಪತ್ನಿಯರು ಕೊಟ್ಟನ್ನ ।
ಸುಭುಜ ತಾ ಭುಂಜಿಸಿದ ಸ್ವರಮಣ
ಕುಬುಜೆ ಗಂಧಕೆ ಒಲಿದ ಮುನಿಗಣ
ವಿಬುಧಸೇವಿತ ಬಿಡುವನೇ ನಾವಿತ್ತ ಕರ್ಮಫಲ ॥24॥
ಗಣನೆಯಿಲ್ಲದ ಪರಮಸುಖ ಸ-
ದ್ಗುಣಗಣಂಗಳ ಲೇಶಲೇಶಕೆ
ಎಣೆಯೆನಿಸದು ರಮಾಬ್ಜಭವಶಕ್ರಾದಿಗಳ ಸುಖವು ।
ಉಣುತುಣುತ ಮೈ ಮರೆತು ಕೃ-
ಷ್ಣಾರ್ಪಣವೆನಲು ಕೈಗೊಂಬನರ್ಭಕ
ಜನನಿ ಭೋಜನ ಸಮಯದಲಿ ಕೈಯೊಡ್ಡುವಂದದಲಿ ॥25॥
ಜೀವಕೃತ ಕರ್ಮಗಳ ಬಿಡದೆ ರ-
ಮಾವರನು ಸ್ವೀಕರಿಸಿ ಫಲಗಳ-
ನೀವನಧಿಕಾರಾನುಸಾರದಲವರಿಗನವರತ ।
ಪಾವಕನು ಸರ್ವಸ್ವ ಭುಂಜಿಸಿ
ತಾ ವಿಕಾರವನೈದನೊಮ್ಮೆಗೆ
ಪಾವನಕೆ ಪಾವನನೆನಿಪ ಹರಿಯುಂಬುದೇನರಿದು ॥26॥
ಕಲುಷಜಿಹ್ವೆಗೆ ಸುಷ್ಠುಭೋಜನ
ಜಲಮೊದಲು ವಿಷದೋರುವುದು ನಿ-
ಷ್ಕಲುಷ ಜಿಹ್ವೆಗೆ ಸುರಸ ತೋರುವುದೆಲ್ಲ ಕಾಲದಲಿ ।
ಸುಲಲಿತಾಂಗಗೆ ಸಕಲರಸ ಮಂ-
ಗಳವೆನಿಸುತಿಹುದನ್ನಮಯ ಕೈ-
ಗೊಳದೆ ಬಿಡುವನೆ ಪೂತನಿಯ ವಿಷಮೊಲೆಯನುಂಡವನು ॥27॥
ಪೇಳಲೇನು ಸಮೀರದೇವನು
ಕಾಲಕೂಟವನುಂಡು ಲೋಕವ
ಪಾಲಿಸಿದ ತದ್ದಾಸನೋರ್ವನು ಅಮೃತನೆನಿಸಿದನು ।
ಶ್ರೀಲಕುಮಿವಲ್ಲಭ ಶುಭಾಶುಭ
ಜಾಲಕರ್ಮಗಳುಂಬನು ಪಚಯ-
ದೇಳಿಗೆಗಳವಗಿಲ್ಲವೆಂದಿಗು ಸ್ವರಸಗಳ ಬಿಟ್ಟು ॥28॥
ಈ ಪರಿಯಲಚ್ಯುತನ ತತ್ತ-
ದ್ರೂಪ ತನ್ನಾಮಗಳ ಸಲೆ ನಾ-
ನಾ ಪದಾರ್ಥದಿ ನೆನೆನೆನೆದು ಭುಂಜಿಸುತಲಿರು ವಿಷಯ ।
ಪ್ರಾಪಕ ಸ್ಥಾಪಕ ನಿಯಾಮಕ
ವ್ಯಾಪಕನು ಎಂದರಿದು ನೀ ನಿ-
ರ್ಲೇಪನಾಗಿರು ಪುಣ್ಯಪಾಪಗಳರ್ಪಿಸವನಡಿಗೆ ॥29॥
ಐದು ಲಕ್ಷೆಂಭತ್ತರೊಂಭ-
ತ್ತಾದ ಸಾವಿರದೇಳುನೂರ್ಮೇ-
ಲೈದು ರೂಪವಧರಿಸಿ ಭೋಕ್ತೃಗ ಭೋಜ್ಯನೆಂದೆನಿಸಿ ।
ಶ್ರೀಧರಾದುರ್ಗಾರಮಣ ಪಾ-
ದಾದಿಶಿರಪರ್ಯಂತ ವ್ಯಾಪಿಸಿ
ಕಾದುಕೊಂಡಿಹ ಸಂತತ ಜಗನ್ನಾಥ ವಿಠ್ಠಲನು ॥30॥
॥ ಭೋಜನರಸ ವಿಭಾಗ ಸಂಧಿ ಸಂಪೂರ್ಣ ॥