Command Palette

Search for a command to run...

ಅಪಮೃತ್ಯು ಪರಿಹರಿಸೋ ಅನಿಲದೇವ
ಜಗನ್ನಾಥದಾಸರು
ಅಪಮೃತ್ಯು ಪರಿಹರಿಸೋ ಅನಿಲದೇವ । ಕೃಪಣವತ್ಸಲನೆ ಕಾವರ ಕಾಣೆ ಜಗದೊಳಗೆ ॥ಪ॥ ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು ಎನಗಿಲ್ಲ ಆವಾವ ಜನುಮದಲ್ಲಿ । ಅನುದಿನವು ಎಮ್ಮ ನೀನುದಾಸೀನ ಮಾಡುವುದು ಅನುಚಿತವು ಜಗದಿ ಸಜ್ಜನ ಶಿಖಾಮಣಿಯೇ ॥೧॥ ಕರಣಾಭಿಮಾನಿ ಕಿಂಕರರು ಮೂರ್ಲೋಕ ದೊರೆ ಹರಿಯು ನಿನ್ನೊಳಗಿಪ್ಪ ಸರ್ವಕಾಲ । ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ ಗುರುವರ್ಯ ನೀ ದಯಾಕರನೆಂದು ಬಿನ್ನೈಪೆ ॥೨॥ ಭವರೋಗ ಮೋಚಕನೆ ಪವಮಾನರಾಯ ನಿ- ನ್ನವರವನು ನಾನು ಮಾಧವಪ್ರಿಯನೆ । ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ ದಿವಿಜಗಣ ಮಧ್ಯದಲಿ ಪ್ರವರ ನೀನಹುದೋ ॥೩॥ ಜ್ಞಾನಾಯು ರೂಪಕನು ನೀನಹುದೊ ವಾಣಿ ಪಂ- ಚಾನನಾದ್ಯಮರರಿಗೆ ಪ್ರಾಣದೇವ । ದೀನವತ್ಸಲನೆಂದು ನಾನಿನ್ನ ಮೊರೆಹೊಕ್ಕೆ ದಾನವಾರಣ್ಯ ಕೃಶಾನು ಸರ್ವದ ಎಮ್ಮ ॥೪॥ ಸಾಧನಶರೀರವಿದು ನೀ ದಯದಿ ಕೊಟ್ಟದ್ದು ಸಾಧಾರಣವಲ್ಲ ಸಾಧುಪ್ರಿಯನೆ । ವೇದವಾದೋದಿತ ಜಗನ್ನಾಥವಿಠ್ಠಲನ ಪಾದಭಜನೆಯನಿತ್ತು ಮೋದಕೊಡು ಸತತ ॥೫॥